ಆಗಸ್ಟ್ 15ರೊಳಗೆ ಲಸಿಕೆ ನೀಡುವ ಐಸಿಎಂಆರ್ ಯೋಜನೆ ಪ್ರಶ್ನಿಸಿದ ಪೃಥ್ವಿರಾಜ್ ಚವಾಣ್
ಮುಂಬೈ: ಆಗಸ್ಟ್ 15 ರೊಳಗೆ ಕರೋನಾ ವೈರಸ್ ಗೆ ಲಸಿಕೆ ಬಿಡುಗಡೆ ಮಾಡುವ ಐಸಿಎಂಆರ್ ಯೋಜನೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚವಾಣ್ ಅವರು, ಇದು ಪ್ರಧಾನಿ ಮೋದಿ ಅವರಿಗೆ ಕೆಂಪು ಕೋಟೆಯಿಂದ ದೊಡ್ಡ ಘೋಷಣೆ ಮಾಡಲು ಅನುವು ಮಾಡಿಕೊಡುವ ಉದ್ದೇಶ ಹೊಂದಿದೆ ಎಂದು ಶನಿವಾರ ಆರೋಪಿಸಿದ್ದಾರೆ.
ಆಗಸ್ಟ್ 15 ರೊಳಗೆ ವಿಶ್ವದ ಮೊದಲ ಕೊವಿಡ್ -19 ಲಸಿಕೆಯನ್ನು ಬಿಡುಗಡೆ ಮಾಡುವ ಗುರಿ ಹೊಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ(ಐಸಿಎಂಆರ್) ಶುಕ್ರವಾರ ತಿಳಿಸಿದೆ.
"ಕೊರೋನಾ ಲಸಿಕೆಗೆ ಜಾಗತಿಕ ತಜ್ಞರು 12 ರಿಂದ 18 ತಿಂಗಳ ಕಾಲಾವಧಿಯನ್ನು ನೀಡುತ್ತಿರುವಾಗ ಐಸಿಎಂಆರ್ ಭಾರತೀಯ ಕರೋನಾ(ವೈರಸ್) ಲಸಿಕೆಗಾಗಿ ಆಗಸ್ಟ್ 15ರ ಅವಾಸ್ತವಿಕ ಟೈಮ್‌ಲೈನ್‌ಗಾಗಿ ಏಕೆ ಧಾವಿಸುತ್ತಿದೆ" ಎಂದು ಚವಾನ್ ಟ್ವೀಟ್ ಮಾಡಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಿಂದ ಪ್ರಮುಖ ಘೋಷಣೆ ಮಾಡಲು ಅನುವು ಮಾಡಿಕೊಡುವ ಉದ್ದೇಶದಿಂದ ಐಸಿಎಂಆರ್ ಲಸಿಕೆ ಅಭಿವೃದ್ಧಿಪಡಿಸುವ ಆತುರದಲ್ಲಿದೆ ಎಂದು ಕಾಂಗ್ರೆಸ್ ಮುಖಂಡ ದೂರಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಚವಾಣ್ ಒತ್ತಾಯಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ