ರಕ್ಷಣಾ ಸ್ಥಾಯಿ ಸಮಿತಿಯ ಒಂದು ಸಭೆಗೂ ಹಾಜರಾಗದ ರಾಹುಲ್ ಗಾಂಧಿ ಸೈನಿಕರ ಶೌರ್ಯ ಪ್ರಶ್ನಿಸುತ್ತಾರೆ: ಜೆ.ಪಿ.ನಡ್ಡಾ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹೊಸ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ರಾಹುಲ್ ಗಾಂಧಿಯವರು ರಕ್ಷಣಾ ಸ್ಥಾಯಿ ಸಮಿತಿಯ ಒಂದು ಸಭೆಗೂ ಹಾಜರಾಗಿಲ್ಲ. ಬದಲಾಗಿ ಭಾರತ-ಚೀನಾ ಗಡಿ ವಿವಾದ ಹೆಸರಿನಲ್ಲಿ ದೇಶದ ಬಗ್ಗೆ ಅಪಪ್ರಚಾರ ಮಾಡುತ್ತಾ ಸೇನಾಪಡೆಯ ಶೌರ್ಯವನ್ನು ಪ್ರಶ್ನಿಸುತ್ತಿದ್ದಾರೆ, ಒಬ್ಬ ವಿರೋಧ ಪಕ್ಷದ ನಾಯಕನಾಗಿ ಏನು ಮಾಡಬಾರದು ಅವೆಲ್ಲವನ್ನೂ ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿಯವರು ಈ ದೇಶದ ಒಂದು ಭವ್ಯವಾದ ಸಾಂಪ್ರದಾಯಿಕ ಮನೆತನಕ್ಕೆ ಸೇರಿದ್ದಾರೆ, ಆ ಮನೆತನಕ್ಕೆ ದೇಶದ ಭದ್ರತೆ ಮುಖ್ಯವಲ್ಲ, ಬದಲಿಗೆ ಆಯೋಗಗಳು ಮುಖ್ಯವಾಗಿದೆ. ಕಾಂಗ್ರೆಸ್ ನಲ್ಲಿ ಸಂಸದೀಯ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಹಲವು ಯೋಗ್ಯ ನಾಯಕರಿದ್ದಾರೆ, ಆದರೆ ಒಂದು ಮನೆತನ ಇಂತಹ ನಾಯಕರನ್ನು ಬೆಳೆಯಲು ಬಿಡುವುದಿಲ್ಲ. ಅದು ನಿಜಕ್ಕೂ ಬೇಸರದ ಸಂಗತಿ ಎಂದು ಜೆ ಪಿ ನಡ್ಡಾ ಟೀಕಿಸಿದ್ದಾರೆ.
ಕೋವಿಡ್-19 ನಿರ್ವಹಣೆ, ಭಾರತ-ಚೀನಾ ಗಡಿಯಲ್ಲಿ ಸೇನಾ ನಿಲುಗಡೆ ಬಗ್ಗೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಬಿಜೆಪಿ ಕೊಡುತ್ತಾ ಬಂದಿದೆ.


