ರಾಜಸ್ತಾನ ರಾಜಕೀಯ ಬಿಕ್ಕಟ್ಟು: ಬಹುಮತ ಸಾಬೀತಿಗೆ ಪೈಲಟ್ ಬಣ ಒತ್ತಾಯ, ಕಾದು ನೋಡುವ ತಂತ್ರಕ್ಕೆ ಬಿಜೆಪಿ ಮುಂದು

ರಾಜಸ್ತಾನ ವಿಧಾನಸಭೆಯಲ್ಲಿ ಸದಸ್ಯರ ಸದನ ಪರೀಕ್ಷೆಗೆ ಒತ್ತಾಯಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಸತೀಶ್ ಪೂನಿಯಾ
ಸತೀಶ್ ಪೂನಿಯಾ

ಜೈಪುರ್: ರಾಜಸ್ತಾನ ವಿಧಾನಸಭೆಯಲ್ಲಿ ಸದಸ್ಯರ ಸದನ ಪರೀಕ್ಷೆಗೆ ಒತ್ತಾಯಿಸುವುದಿಲ್ಲ ಎಂದು ಬಿಜೆಪಿ ಹೇಳಿದೆ.

ಸದನದಲ್ಲಿ ಬಹುಮತ ಸಾಬೀತಿನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಅವರನ್ನು ಕೇಳಿದಾಗ, ಸದ್ಯಕ್ಕೆ ನಾವು ಸದನ ಪರೀಕ್ಷೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಅವರನ್ನು ಒತ್ತಾಯಿಸುವುದಿಲ್ಲ. ಭ್ರಷ್ಟ ಸರ್ಕಾರ ಈ ಕೊರೋನಾ ಬಿಕ್ಕಟ್ಟು ಸಮಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ನಮ್ಮ ಆಕ್ಷೇಪವಾಗಿದೆ. ಸರ್ಕಾರ ದುರ್ಬಲವಾಗಿದೆ. ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡಲಿ ಎಂದು ಹೇಳಿದರು.

ಸರ್ಕಾರದ ಬುಡ ದುರ್ಬಲವಾಗಿದೆ. ಕಾಂಗ್ರೆಸ್ ನಾಯಕರೆಲ್ಲರೂ ಒಗ್ಗಟ್ಟಿನಿಂದ ಇದ್ದಾರೆ ಎಂದು ಹೇಳುತ್ತಿದ್ದಾರೆ, ಆದರೆ ಅವರ ಒಳಜಗಳಗಳು ಬಹಿರಂಗವಾಗಿದೆ. ಸಚಿನ್ ಪೈಲಟ್ ಪಕ್ಷದಲ್ಲಿ ಅವಮಾನ ಅನುಭವಿಸಿ ಹೊರನಡೆದಿದ್ದಾರೆ. ಇಂತಹ ವಾತಾವರಣದಲ್ಲಿ ಜನರ ಪರವಾಗಿ ಸರ್ಕಾರ ಹೇಗೆ ಕೆಲಸ ಮಾಡಲು ಸಾಧ್ಯ, ಅದು ತನ್ನಷ್ಟಕ್ಕೇ ಬಿದ್ದುಹೋಗಲಿದೆ ಎಂದರು.

ಕಾಂಗ್ರೆಸ್ ನಲ್ಲಿ ಕೆಲಸ ಮಾಡುವ ಯುವ ನಾಯಕರಿಗೆ ಬೆಲೆ ಕೊಡುತ್ತಿಲ್ಲ, ಇದರಿಂದಾಗಿಯೇ ಜ್ಯೋತಿರಾಧಿತ್ಯ ಸಿಂದಿಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ರಾಜಸ್ತಾನದಲ್ಲಿ ಸಚಿನ್ ಪೈಲಟ್ ಸ್ಥಿತಿಯೂ ಕೂಡ ಅದೇ ರೀತಿ. ಚೆನ್ನಾಗಿ ಕೆಲಸ ಮಾಡಿ ಪಕ್ಷ ಸಂಘಟಿಸಿದ್ದಾರೆ, ಆದರೆ ಅಧಿಕಾರ ವಿಷಯದಲ್ಲಿ ಅವರನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದರು.

ಈ ಮಧ್ಯೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಸಚಿನ್ ಪೈಲಟ್ ಬಣ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಅವರನ್ನು ಒತ್ತಾಯಿಸಿದೆ. ಇದರಿಂದ ಅಶೋಕ್ ಗೆಹ್ಲೊಟ್ ಪರ ಎಷ್ಟು ಶಾಸಕರಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ರಮೇಶ್ ಮೀನಾ ಹೇಳಿದ್ದಾರೆ. ಇವರು ಸಚಿನ್ ಪೈಲಟ್ ಬಣದಲ್ಲಿ ಗುರುತಿಸಿಕೊಂಡ ಪ್ರಮುಖರಾಗಿದ್ದಾರೆ.

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲೇಬೇಕು, ಹಾಗಾದರೆ ನಿಜವಾಗಿಯೂ ಮುಖ್ಯಮಂತ್ರಿಗಳ ಪರ 109 ಶಾಸಕರ ಬೆಂಬಲವಿದೆಯೇ ಎಂದು ಗೊತ್ತಾಗುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com