ರಾಜಸ್ಥಾನ ಬಿಕ್ಕಟ್ಟು: ಅನರ್ಹತೆ ವಿರುದ್ಧ ಹೊಸದಾಗಿ ಅರ್ಜಿ ಸಲ್ಲಿಸಲು ಪೈಲಟ್ ಕ್ಯಾಂಪ್ ಗೆ ಹೈಕೋರ್ಟ್ ಅನುಮತಿ
ಜೈಪುರ: ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಇತರೆ 18 ಬಂಡಾಯ ಶಾಸಕರಿಗೆ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ರಾಜಸ್ಥಾನ ಹೈಕೋರ್ಟ್ ಅನುಮತಿ ನೀಡಿದೆ.
ಸಚಿನ್ ಪೈಲಟ್ ಹಾಗೂ ಇತರ 18 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ಸಿ. ಪಿ. ಜೋಷಿ ಅವರು ನೋಟಿಸ್ ನೀಡಿದ್ದು, ಇದನ್ನು ಪ್ರಶ್ನಿಸಿ ಪೈಲಟ್ ಕ್ಯಾಂಪ್ ಹೈಕೋರ್ಟ್ ಮೆಟ್ಟಿಲೇರಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಅರ್ಜಿಯ ವಿಚಾರಣೆ ನಡೆಸಲಾಯಿತು. ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಅರ್ಜಿಯನ್ನು ತಿದ್ದುಪಡಿ ಮಾಡಲು ಸಮಯ ಕೋರಿದರು.
ಸ್ಪೀಕರ್ ನೀಡಿರುವ ನೋಟಿಸ್ ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಲು ತಮ್ಮ ಶಾಸಕರು ಬಯಸಿದ್ದು, ಹೊಸದಾಗಿ ಅರ್ಜಿ ಸಲ್ಲಿಸಲು ಸಮಯ ನೀಡಬೇಕು ಎಂದು ಸಾಳ್ವೆ ಮನವಿ ಮಾಡಿದರು. ಸಾಳ್ವೆ ಮನವಿ ಪುರಸ್ಕರಿಸಿದ ಕೋರ್ಟ್, ಪೈಲಟ್ ಕ್ಯಾಂಪ್ ಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸಮಯ ನೀಡಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ನಾಳೆ ಹೈಕೋರ್ಟ್‌ನ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ.
ರಾಜಸ್ಥಾನ ಸ್ಪೀಕರ್ ಪೈಲಟ್ ಮತ್ತು ಇತರ 18 ಶಾಸಕರಿಗೆ ನೋಟಿಸ್ ನೀಡಿರುವುದು ಸಂವಿಧಾನದ 10 ವಿಧಿಯ ವ್ಯಾಪ್ತಿಯನ್ನು ಮೀರಿದೆ.ಅವರು ಬಿಜೆಪಿ ಸೇರುತ್ತೇವೆ ಅಥವಾ ಬೆಂಬಲಿಸುತ್ತೇವೆ ಎಂದು ಹೇಳಿಕೆ ನೀಡಿಲ್ಲ ಎಂದು ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ರಾಕೇಶ್ ದ್ವಿವೇದಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ