
ಮುಂಬೈ: ನಗರದಲ್ಲಿ ಸುರಿದ ಅವ್ಯಾಹತ ಮಳೆಯಿಂದ ಎರಡು ಪ್ರತ್ಯೇಕ ಘಟನೆಗಳಲ್ಲಿ ಕಟ್ಟಡಗಳು ಕುಸಿದು ಅವಶೇಷಗಳಡಿಯಲ್ಲಿ ಮೃತಪಟ್ಟವರ ಸಂಖ್ಯೆ 6ಕ್ಕೇರಿದೆ.
ಮುಂಬೈ ನಗರ ಮತ್ತು ಉಪ ನಗರಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಅವ್ಯಾಹತವಾಗಿ ಸುರಿಯುತ್ತಿದ್ದು, ನಿನ್ನೆ ಪಶ್ಚಿಮ ಮುಂಬೈಯ ಮಾಲ್ವನಿ ಎಂಬಲ್ಲಿ ಕಟ್ಟಡ ಕುಸಿದು ಇಬ್ಬರು ಮೃತಪಟ್ಟು 13 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿತ್ತು. ಇನ್ನೂ ನಾಲ್ಕೈದು ಮಂದಿ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಘಟನೆಯಲ್ಲಿ ದಕ್ಷಿಣ ಮುಂಬೈಯ ಫೋರ್ಟ್ ಪ್ರದೇಶದಲ್ಲಿ ಐದಂತಸ್ತಿನ ಕಟ್ಟಡ ಕುಸಿದು ಬಿದ್ದು 80 ವರ್ಷ ಹಳೆಯ ಕಟ್ಟಡ ಕುಸಿದುಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಬಂದು ಹಲವರನ್ನು ಪ್ರಾಣಾಪಾಯದಿಂದ ಹೊರತೆಗೆದಿದ್ದಾರೆ. ಒಬ್ಬ ಸಿಕ್ಕಿಹಾಕಿಕೊಂಡಿರುವ ಶಂಕೆಯಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ವಸತಿ ಸಚಿವ ಜಿತೇಂದ್ರ ಅವ್ಹಾಡ್, ಮೇಯರ್ ಕಿಶೋರಿ ಪೆಡ್ನೆಕರ್, ನಗರ ಪಾಲಿಕೆ ಆಯುಕ್ತ ಐ ಎಸ್ ಚಹಲ್, ನಗರ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣೆ ಮತ್ತು ಪರಿಹಾರ ಕಾರ್ಯಗಳ ಬಗ್ಗೆ ಅವಲೋಕಿಸಿದ್ದಾರೆ.
ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ಮುಂದುವರಿದಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ತಿಳಿಸಿದೆ.
Advertisement