ವಿಕಾಸ್ ದುಬೆಯಂತಹ ಪಾತಕಿ ಜಾಮೀನು ಪಡೆದಿರುವುದು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯ: ಸುಪ್ರೀಂ

ಇತ್ತೀಚಿಗೆ ಕಾನ್ಪುರದಲ್ಲಿ ನಡೆದ ಪೊಲೀಸ್ ಎನ್‍ಕೌಂಟರ್‍ ನಲ್ಲಿ ಸಾವನ್ನಪ್ಪಿದ ಪಾತಕಿ ವಿಕಾಸ್ ದುಬೆ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಆರೋಪಿ ಜಾಮೀನಿನ ಮೇಲೆ ಹೊರಗಿದ್ದದ್ದು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.
ವಿಕಾಸ್ ದುಬೆ
ವಿಕಾಸ್ ದುಬೆ

ನವದೆಹಲಿ: ಇತ್ತೀಚಿಗೆ ಕಾನ್ಪುರದಲ್ಲಿ ನಡೆದ ಪೊಲೀಸ್ ಎನ್‍ಕೌಂಟರ್‍ ನಲ್ಲಿ ಸಾವನ್ನಪ್ಪಿದ ಪಾತಕಿ ವಿಕಾಸ್ ದುಬೆ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಆರೋಪಿ ಜಾಮೀನಿನ ಮೇಲೆ ಹೊರಗಿದ್ದದ್ದು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ.

ಪಾತಕಿ ದುಬೆ ಎನ್ ಕೌಂಟರ್ ಪ್ರಕರಣದ ಕುರಿತು ಕೋರ್ಟ್ ಮೇಲುಸ್ತುವಾರಿಯಲ್ಲಿ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ಸುಪ್ರೀಂ ಪೀಠ, ಹಲವು ಪ್ರಕರಣಗಳು ದಾಖಲಾಗಿದ್ದರೂ ದುಬೆ ಜಾಮೀನು ಪಡೆದಿರುವುದು ನ್ಯಾಯಾಂಗ ವ್ಯವಸ್ಥೆಯ ಪೈಫಲ್ಯ. ಹಲವು ಪ್ರಕರಣಗಳು ದಾಖಲಾಗಿದ್ದರೂ ವಿಕಾಸ್ ದುಬೆಗೆ ಜಾಮೀನು ನೀಡಿರುವುದು ನೋಡಿ ನಮಗೆ ಅಚ್ಚರಿಯಾಗಿದೆ ಎಂದಿದ್ದಾರೆ.

ಇದೇ ವೇಳೆ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರೊಬ್ಬರನ್ನು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರನ್ನು ದುಬೆ ಎನ್ ಕೌಂಟರ್ ಪ್ರಕರಣದ ತನಿಖಾ ತಂಡದ ಸದಸ್ಯರನ್ನಾಗಿಸುವ ಬಗ್ಗೆ ಪರಿಗಣಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕೆಲವು ಹೇಳಿಕೆಗಳನ್ನು ನೀಡಿದ್ದರೆ ಮತ್ತು ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಕ್ರಮ ಅನುಸರಿಸಲಾಗಿದೆ? ಎಂದು ಉತ್ತರ ಪ್ರದೇಶ ಪರವಾಗಿ ವಿಚಾರಣೆಗೆ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ನೀವು ಕಾನೂನನ್ನು ಪಾಲಿಸಬೇಕು ಎಂದು ಸೂಚಿಸಿದೆ.

ಇನ್ನು ಪಾತಕಿ ವಿಕಾಸ್ ದುಬೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯಗಳು ನೀಡಿದ ಆದೇಶಗಳ ಬಗ್ಗೆ ವರದಿ ನೀಡುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿದೆ.

60ಕ್ಕು ಹೆಚ್ಚು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದ ಪಾತಕಿ ವಿಕಾಸ್ ದುಬೆ ಮತ್ತು ಆತನ ಸಹಚರರು ಎಂಟು ಪೊಲೀಸರನ್ನು ಹತ್ಯೆ ಮಾಡಿ ಆರು ಮಂದಿಯನ್ನು ಗಾಯಗೊಳಿಸಿದ್ದರು. ನಂತರ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಪಾತಕಿಯನ್ನು ಬಂಧಿಸಿದ್ದ ಪೊಲೀಸರು, ಬಳಿಕ ಎನ್ ಕೌಂಟರ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com