ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ಬೆಳ್ಳಿ ಇಟ್ಟಿಗೆಗಳು!

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಆಗಸ್ಟ್ ೫ ರಂದು ನಡೆಯಲಿರುವ ಭೂಮಿ ಪೂಜೆಯಲ್ಲಿ ಬೆಳ್ಳಿ ಇಟ್ಟಿಗೆಗಳನ್ನು ಸಹ ಬಳಸಲಿದ್ದಾರೆ.
ರಾಮ ಮಂದಿರ
ರಾಮ ಮಂದಿರ

ಲಕ್ನೋ:  ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಆಗಸ್ಟ್ ೫ ರಂದು ನಡೆಯಲಿರುವ ಭೂಮಿ ಪೂಜೆಯಲ್ಲಿ ಬೆಳ್ಳಿ ಇಟ್ಟಿಗೆಗಳನ್ನು ಸಹ ಬಳಸಲಿದ್ದಾರೆ. ಐದು ಬೆಳ್ಳಿ ಇಟ್ಟಿಗೆಗಳಿಂದ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಶಿಲಾನ್ಯಾಸದ ವೇಳೆ ಪ್ರಧಾನಿ ಮೋದಿ ಮೊದಲ ಇಟ್ಟಿಗೆ ಇರಿಸಲಿದ್ದಾರೆ. 

ಹಿಂದೂ ಪುರಾಣಗಳ ಪ್ರಕಾರ, ಐದು ಗ್ರಹಗಳ ಸಂಕೇತವಾಗಿ ಐದು ಬೆಳ್ಳಿ ಇಟ್ಟಿಗೆಗಳನ್ನು ಶಿಲಾನ್ಯಾಸದಲ್ಲಿ ಬಳಸಲಾಗುತ್ತದೆ. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನೀಡಿದ ವಿನ್ಯಾಸದ ಪ್ರಕಾರ ಮಂದಿರ ನಿರ್ಮಿಸಲಾಗುವುದು. ದೇಗುಲ ವಿಷ್ಣು ದೇವಾಲಯದ ಶೈಲಿಯಲ್ಲಿ ನಿರ್ಮಿಸಲಾಗುತ್ತದೆ. ಗರ್ಭಗುಡಿ ಅಷ್ಟಭುಜಾಕೃತಿ ಆಕಾರದಲ್ಲಿರಲಿದೆ.

ಈ ಮೊದಲು ರೂಪಿಸಿದ್ದ ಮಾದರಿಗಿಂತ ದೇಗುಲದ ಎತ್ತರವನ್ನು ಹೆಚ್ಚಿಸಲಾಗಿದೆ. ಮೊದಲು ಅಂದು ಕೊಂಡಿದ್ದ ಮೂರು ಗೋಪುರಗಳ ಬದಲಿಗೆ  ಐದು ಗೋಪುರಗಳು ನಿರ್ಮಾಣಗೊಳ್ಳಲಿವೆ. ದೇವಾಲಯದ ವಿಸ್ತೀರ್ಣ ಸುಮಾರು ೭೬ ರಿಂದ ೮೪ ಸಾವಿರ ಚದರ ಗಜಗಳಾಗಿರಲಿದೆ. ಆರಂಭದಲ್ಲಿ ಕೇವಲ ೩೮ ಸಾವಿರ ಚದರ ಗಜಗಳಷ್ಟು ಪ್ರದೇಶದಲ್ಲಿ ದೇಗುಲ ನಿರ್ಮಿಸಲು ಯೋಜಿಸಲಾಗಿತ್ತು.

ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೂ ಕೂಡಾ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗಿದೆ. ಸಮಾರಂಭದಲ್ಲಿ  ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ , ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾಗವಹಿಸುವ ಗಣ್ಯರಲ್ಲಿ ಸೇರಿದ್ದಾರೆ.

ರಾಮ ಜನ್ಮಭೂಮಿ ಸ್ಥಳದಲ್ಲಿ ಮೂರು ದಿನಗಳ ಕಾಲ ವೇದ ಘೋಷಗಳು ಮೊಳಗಲಿವೆ. ಪೂಜೆ ಆಗಸ್ಟ್ ೩ ರಂದೇ ಪ್ರಾರಂಭವಾಗಲಿದ್ದು, ಆಗಸ್ಟ್ ೪ ರಂದು ರಾಮಚಾರ್ಯ ಪೂಜೆ ನೆರವೇರಿಸಲಿದ್ದಾರೆ.ಆಗಸ್ಟ್ ೫ ರ ಮಧ್ಯಾಹ್ನ ೧೨ ಗಂಟೆ ೧೫ ನಿಮಿಷಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಫೆಬ್ರವರಿ ೫ ರಂದು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚಿಸಿದ ನಂತರ ಪ್ರಧಾನಿ ಮೋದಿ ಮೊದಲ ಬಾರಿ ಆಯೋಧ್ಯೆಗೆ ಆಗಮಿಸಲಿದ್ದಾರೆ.

ರಾಮ ಮಂದಿರ ಚಳವಳಿಯಲ್ಲಿ ಶಿವಸೇನೆ ವಹಿಸಿದ್ದ ಮಹತ್ವದ ಪಾತ್ರದಿಂದಾಗಿ, ಆ ಪಕ್ಷಕ್ಕೂ ಭೂಮಿ ಪೂಜೆಗೆ ಆಹ್ವಾನ ನೀಡಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ್ ಠಾಕ್ರೆ ಅವರ ತಂದೆ ಬಾಳಾ ಸಾಹೇಬ್ ಠಾಕ್ರೆ ಹೆಸರು ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಹೆಸರಿಸಲಾಗಿತ್ತು. ಆದರೆ ಅವರು ನಿಧನ ಹೊಂದಿದ ನಂತರ ಹೆಸರನ್ನು ಪ್ರಕರಣದಿಂದ ಕೈಬಿಡಲಾಗಿದೆ. 

ಕಳೆದ ಮಾರ್ಚ್ ನಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅಯೋಧ್ಯೆಗೆ ಭೇಟಿ ನೀಡಿದ್ದರು. ರಾಮ ಮಂದಿರ ನಿರ್ಮಾಣಕ್ಕಾಗಿ ೧ ಕೋಟಿ ರೂ. ಗಳ ದೇಣಿಗೆಯನ್ನೂ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com