
ಜೈಪುರ/ನವದೆಹಲಿ: ಸಚಿನ್ ಪೈಲಟ್ ಮತ್ತು ಇತರ ಕಾಂಗ್ರೆಸ್ ಬಂಡಾಯ ನಾಯಕರ ವಿರುದ್ಧ ತೀರ್ಪನ್ನು ಹೈಕೋರ್ಟ್ ಮುಂದೂಡಿರುವುದರ ವಿರುದ್ಧವಾಗಿ ರಾಜಸ್ಥಾನ ಸ್ಪೀಕರ್ ಸಿ ಪಿ ಜೋಶಿ ಅವರು ಬುಧವಾರ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಉಂಟಾಗಿರುವ ಸಾಂವಿಧಾನಿಕ ಬಿಕ್ಕಟ್ಟನ್ನು ವಿಳಂಬ ಮಾಡದೆ ಶೀಘ್ರವೇ ಬಗೆಹರಿಸಲು ಸುಪ್ರೀಂ ಕೋರ್ಟ್ ಮುಂದೆ ಮನವಿ ಮಾಡಲು ನಿರ್ಧರಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸಚಿನ್ ಪೈಲಟ್ ಸೇರಿದಂತೆ 19 ಮಂದಿ ಶಾಸಕರ ವಿರುದ್ಧ ಅನರ್ಹತೆ ನೊಟೀಸ್ ನೀಡಿದ್ದ ರಾಜಸ್ತಾನ ವಿಧಾನಸಭೆ ಸ್ಪೀಕರ್ ಸಿ ಪಿ ಜೋಶಿ ಅವರಿಗೆ ಕ್ರಮ ಕೈಗೊಳ್ಳಲು ಮೂರು ದಿನಗಳ ಕಾಲ ವಿಳಂಬ ಮಾಡುವಂತೆ ಕಳೆದ ವಾರ ಹೈಕೋರ್ಟ್ ಆದೇಶ ನೀಡಿತ್ತು.
ನಾಡಿದ್ದು ಶುಕ್ರವಾರದವರೆಗೆ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನಿನ್ನೆ ಮತ್ತೆ ಸ್ಪೀಕರ್ ಅವರಿಗೆ ಹೈಕೋರ್ಟ್ ಆದೇಶ ನೀಡಿದೆ. ನಾಡಿದ್ದು ಶುಕ್ರವಾರ ಬಂಡಾಯ ಶಾಸಕರ ಅನರ್ಹತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ.
ಇದೀಗ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸ್ಪೀಕರ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಶಾಸಕರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕೆಂದು ಸ್ಪೀಕರ್ ಅವರು ತೀರ್ಮಾನಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಶಾಸಕರಿಗೆ ನೊಟೀಸ್ ನೀಡುವ ಸಂಪೂರ್ಣ ಅಧಿಕಾರ ಸ್ಪೀಕರ್ ಅವರಿಗಿದೆ. ಸ್ಪೀಕರ್ ಅವರ ತೀರ್ಮಾನದ ನಂತರ ನ್ಯಾಯಾಂಗ ಅದನ್ನು ಪರಿಶೀಲನೆ ಮಾಡಬಹುದು, ಬಂಡಾಯ ಶಾಸಕರ ಅನರ್ಹತೆ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದು ಅಪಾಯಕಾರಿ ನಡೆಯಾಗಿದ್ದು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸುತ್ತದೆ, ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಇಂದು ಸ್ಪೀಕರ್ ಸಿ ಪಿ ಜೋಶಿ ಹೇಳಿದ್ದಾರೆ.
ನಾಡಿದ್ದು ಹೈಕೋರ್ಟ್ ನೀಡಲಿರುವ ತೀರ್ಪು ರಾಜಸ್ತಾನದಲ್ಲಿ ಅಶೋಕ್ ಗೆಹ್ಲೊಟ್ ಸರ್ಕಾರ, ವಿಧಾನಸಭೆಯಲ್ಲಿ ಬಹುಮತ ಸಾಬೀತು ಮೇಲೆ ತೀವ್ರ ಪರಿಣಾಮ ಬೀರಲಿದೆ.
Advertisement