ಸ್ಪೀಕರ್ ತಟಸ್ಥವಾಗಿರಬೇಕು, ನೀವೇಕೆ ಕೋರ್ಟ್ ಗೆ ತಂದಿದ್ದೀರಿ?: ರಾಜಸ್ತಾನ ಸ್ಪೀಕರ್ ಗೆ ಸುಪ್ರೀಂ ಕೋರ್ಟ್ ಪ್ರಶ್ನೆ

ಭಿನ್ನಾಭಿಪ್ರಾಯ ಧ್ವನಿಯನ್ನು ಹತ್ತಿಕ್ಕಲು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ. ಇನ್ನು ಕೇವಲ ಒಂದು ದಿನದಲ್ಲಿ ರಾಜಸ್ತಾನ ಹೈಕೋರ್ಟ್ ತೀರ್ಪು ನೀಡುತ್ತದೆ, ನೀವ್ಯಾಕೆ ಕಾಯಬಾರದು ಎಂದು ರಾಜಸ್ತಾನ ಸ್ಪೀಕರ್ ಸಿ ಪಿ ಜೋಶಿಯವರನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಭಿನ್ನಾಭಿಪ್ರಾಯ ಧ್ವನಿಯನ್ನು ಹತ್ತಿಕ್ಕಲು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ. ಇನ್ನು ಕೇವಲ ಒಂದು ದಿನದಲ್ಲಿ ರಾಜಸ್ತಾನ ಹೈಕೋರ್ಟ್ ತೀರ್ಪು ನೀಡುತ್ತದೆ, ನೀವ್ಯಾಕೆ ಕಾಯಬಾರದು ಎಂದು ರಾಜಸ್ತಾನ ಸ್ಪೀಕರ್ ಸಿ ಪಿ ಜೋಶಿಯವರನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ.

ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಬಂಡಾಯ ಶಾಸಕರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲಿಲ್ಲ ಎಂಬ ಕಾರಣ ನೀಡಿ ಸ್ಪೀಕರ್ ಅನರ್ಹತೆಗೊಳಿಸಿದ್ದರು. ತಮ್ಮ ಅನರ್ಹತೆ ಪ್ರಶ್ನಿಸಿ ಈ 19 ಶಾಸಕರು ರಾಜಸ್ತಾನ ಹೈಕೋರ್ಟ್ ಮೊರೆ ಹೋದರು. ಹೈಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಂಡು ತೀರ್ಪು ನೀಡುವಲ್ಲಿ ವಿಳಂಬ ಮಾಡುತ್ತಿದೆ, ಇದು ಸಾಂವಿಧಾನಿಕವಾಗಿ ಸರಿಯಲ್ಲ ಎಂದು ಹೇಳಿ ನಿನ್ನೆ ಸ್ಪೀಕರ್ ಸಿ ಪಿ ಜೋಶಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಇಂದು ತುರ್ತು ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಸರ್ಕಾರದಲ್ಲಿ ಏನೇ ರಾಜಕೀಯ ಬೆಳವಣಿಗೆಗಳು ನಡೆದರೂ ಸಭಾಧ್ಯಕ್ಷರು ತಟಸ್ಥವಾಗಿರಬೇಕು, ಇಲ್ಲಿ ನೀವೇಕೆ ಕೋರ್ಟ್ ಗೆ ತಂದಿದ್ದೀರಿ, ಪ್ರಜಾಪ್ರಭುತ್ವದಲ್ಲಿ ಭಿನ್ನಮತ ನಿಲುವು, ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದೆ.

ಇಂದು ಸುಪ್ರೀಂ ಕೋರ್ಟ್ ನಲ್ಲಿ ರಾಜಸ್ತಾನ ಸ್ಪೀಕರ್ ಸಿ ಪಿ ಜೋಶಿಯವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, 19 ಮಂದಿ ಶಾಸಕರು ಸಿಎಲ್ ಪಿ ಸಭೆಗೆ ಹಾಜರಾಗಲಿಲ್ಲ, ಅಲ್ಲದೆ ಸರ್ಕಾರವನ್ನು ಉರುಳಿಸಲು ಪಿತೂರಿ ನಡೆಸಿದ್ದಾರೆ ಎಂದರು.

ಆಗ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಇದು ಸರಳ ಪ್ರಕರಣದಂತೆ ಕಂಡುಬರುತ್ತಿಲ್ಲ. ಈ ಶಾಸಕರು ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು, ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಭಿನ್ನಮತ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿತು.

ಶಾಸಕರ ಅನರ್ಹತೆ ಸಾಧ್ಯವೇ ಅಥವಾ ಇಲ್ಲವೇ ಎಂದು ಕೋರ್ಟ್ ಪರಿಶೀಲನೆ ನಡೆಸಲಿದೆ ಎಂದು ಕೂಡ ಹೇಳಿತು.

ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ವಕೀಲ ಕಪಿಲ್ ಸಿಬಲ್, ಈ 19 ಮಂದಿ ಶಾಸಕರು ಹರ್ಯಾಣಕ್ಕೆ ಹೋಗಿ ಅಲ್ಲಿ ಹೊಟೇಲ್ ನಲ್ಲಿ ಉಳಿದುಕೊಂಡು ಅಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಸದನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಬಹುಮತ ಸಾಬೀತುಪಡಿಸಬೇಕು ಎಂದು ಹೇಳಿದ್ದಾರೆ. ಶಾಸಕರ ಅನರ್ಹತೆ ವಿಚಾರವನ್ನು ನ್ಯಾಯಾಲಯ ಈ ಹಂತದಲ್ಲಿ ನಿರ್ಣಯಿಸಲು ಸಾಧ್ಯವಿಲ್ಲ, ನಮ್ಮ ಆತಂಕ ಸಂಪೂರ್ಣವಾಗಿ ಸಾಂವಿಧಾನಿಕವಾಗಿದ್ದು ಸ್ಪೀಕರ್ ನಿರ್ಧಾರ ತೆಗೆದುಕೊಳ್ಳುವವರೆಗೆ ಹೈಕೋರ್ಟ್ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಪಕ್ಷದ ಸಭೆಯಲ್ಲಿ ಭಾಗವಹಿಸಲಿಲ್ಲ ಎಂಬ ಕಾರಣಕ್ಕೆ ಸ್ಪೀಕರ್ ಅವರು ಅನರ್ಹತೆ ನೊಟೀಸನ್ನು ಶಾಸಕರಿಗೆ ನೀಡಬಹುದೇ, ಅವರು ಪಕ್ಷ ವಿರೋಧಿ ನಿಲುವು ತಳೆದಿದ್ದಾರೆ ಎಂದು ಹೇಳಲು ಸಾಧ್ಯವೇ ಎಂದು ನ್ಯಾಯಪೀಠ ಈ ಸಂದರ್ಭದಲ್ಲಿ ಕಪಿಲ್ ಸಿಬಲ್ ಅವರನ್ನು ಪ್ರಶ್ನಿಸಿತು.

ಇದಕ್ಕೂ ಮೊದಲು ಸಿಬಲ್ ಅವರು ಪಕ್ಷದ ಸಭೆಗೆ ಹಾಜರಾಗುವಂತೆ ಎಲ್ಲಾ ಶಾಸಕರಿಗೆ ಮುಖ್ಯ ಸಚೇತಕರು ವಿಪ್ ಜಾರಿ ಮಾಡಿದ್ದರು ಎಂದು ಹೇಳಿದ್ದಕ್ಕೆ ನ್ಯಾಯಾಲಯ ಈ ರೀತಿ ಪ್ರಶ್ನೆ ಮಾಡಿದೆ.

ಕಪಿಲ್ ಸಿಬಲ್ ಇಂದು ವಾದ ಮಂಡನೆ ವೇಳೆ 1992ರ ಕಿಹೊಟೊ ಹೊಲ್ಲೊಹನ್ ಕೇಸಿನಲ್ಲಿ ಸುಪ್ರೀಂ ಕೋರ್ಟ್ ಮಂಡಿಸಿದ್ದ ತೀರ್ಪನ್ನು ಉಲ್ಲೇಖಿಸಿದರು. ಸಂವಿಧಾನದ 10ನೇ ವಿಧಿಯಡಿ ಸ್ಪೀಕರ್ ತೆಗೆದುಕೊಂಡ ಅನರ್ಹತೆ ತೀರ್ಮಾನಕ್ಕೆ ನ್ಯಾಯಾಲಯಗಳು ತಡೆಯನ್ನು ತರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.ಸದನದ ಸದಸ್ಯರನ್ನು ಅನರ್ಹಗೊಳಿಸಿದರೆ ಅಥವಾ ಅಮಾನತು ಮಾಡಿದರೆ ಮಾತ್ರ ನ್ಯಾಯಾಲಯ ಮಧ್ಯಪ್ರವೇಶಿಸಬಹುದು ಎಂದು ಸಿಬಲ್ ವಾದ ಮಾಡಿದರು. 

19 ಮಂದಿ ಶಾಸಕರನ್ನು ಅನರ್ಹತೆಗೊಳಿಸುವುದಕ್ಕೆ ಜುಲೈ 24ರವರೆಗೆ ತಡೆ ನೀಡಿರುವ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಸ್ಪೀಕರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com