ಜೈಪುರ: ರಾಜಸ್ತಾನ ಹೈಕೋರ್ಟ್ ಶುಕ್ರವಾರ ನೀಡಿದ ತೀರ್ಪಿನಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಕ್ರಮದ ಬಗ್ಗೆ ಹೆಜ್ಜೆಯಿಟ್ಟಿರುವ ಅಶೋಕ್ ಗೆಹ್ಲೋಟ್ ರಾಜ್ಯಪಾಲರ ನಿವಾಸಕ್ಕೆ ಕಾಂಗ್ರೆಸ್ ಶಾಸಕರ ಜೊತೆ ಹೋಗಿ ತಮ್ಮ ಬಲಾಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ರಾಜ್ಯಪಾಲರು ಇಂದು ಅಪರಾಹ್ನ 2.30ಕ್ಕೆ ತಮ್ಮನ್ನು ಭೇಟಿ ಮಾಡಲು ಸಿಎಂಗೆ ಸಮಯಾವಕಾಶ ನೀಡಿದ್ದಾರೆ. ಅದಕ್ಕೂ ಮುನ್ನ ಫೈರ್ ಮೊಂಟ್ ಹೊಟೇಲ್ ನಲ್ಲಿ ಇದೀಗ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ನಡೆಯುತ್ತಿದೆ.
ರಾಜಸ್ತಾನ ಹೈಕೋರ್ಟ್ ಇಂದು ನೀಡಿರುವ ತೀರ್ಪಿನ ಪ್ರಕಾರ ಸಚಿನ್ ಪೈಲಟ್ ಸೇರಿದಂತೆ 19 ಮಂದಿ ಬಂಡಾಯ ಶಾಸಕರ ವಿರುದ್ಧ ಸದ್ಯಕ್ಕೆ ಸ್ಪೀಕರ್ ಯಾವುದೇ ನಿರ್ಧಾರ ಕೈಗೊಳ್ಳುವಂತಿಲ್ಲ.
ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸೋಮವಾರ ವಿಧಾಸಭೆ ಅಧಿವೇಶನ ಕರೆಯಬೇಕೆಂದು ನಾವು ರಾಜ್ಯಪಾಲರನ್ನು ಒತ್ತಾಯಿಸುತ್ತೇವೆ. ಹಾಗಾದರೆ ಮಾತ್ರ ಈಗಿನ ಎಲ್ಲಾ ರಾಜಕೀಯ ಅನಿಶ್ಚಿತತೆಗೆ ಸ್ಪಷ್ಟ ಉತ್ತರ ಸಿಗಲಿದೆ. ಈ ಕುರಿತು ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ನಾನು ರಾಜ್ಯಪಾಲರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾಗಲೂ ಹೇಳಿದ್ದೆ. ಈಗ ನಾವು ಅವರ ಬಳಿಗೆ ಹೋಗಿ ಒತ್ತಾಯ ಮಾಡುತ್ತೇವೆ ಎಂದರು.
ಕೇಂದ್ರ ಸರ್ಕಾರದ ಒತ್ತಡದಿಂದ ವಿಧಾನಸಭೆ ಅಧಿವೇಶನ ಕರೆಯಲು ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆ ಎನಿಸುತ್ತಿದೆ. ಅಧಿವೇಶನ ಕರೆದರೆ ರಾಜ್ಯದಲ್ಲಿನ ಕೊರೋನಾ ಸ್ಥಿತಿಗತಿ, ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚಿಸಬಹುದು. ಕೆಲವು ಬಂಡಾಯ ಕಾಂಗ್ರೆಸ್ ಶಾಸಕರು ಹೊರಬಂದು ಸರ್ಕಾರಕ್ಕೆ ಬೆಂಬಲ ನೀಡಲು ಸಿದ್ಧವಿದ್ದಾರೆ. ಆದರೆ ಅವರನ್ನು ಹರ್ಯಾಣದ ಹೊಟೇಲ್ ನಲ್ಲಿ ಕೂಡಿಹಾಕಲಾಗಿದೆ ಎಂದು ಆರೋಪಿಸಿದರು.
Advertisement