ಕೊರೋನಾ ಸೈನಿಕರ ಮೇಲಿನ ಹಿಂಸಾಚಾರ ಸಹಿಸುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಕೋರೋನಾ ಸೋಂಕು ನಿವಾರಣೆಯಲ್ಲಿ ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸರ ಮೇಲೆ ನಡೆಯುವ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. 
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

ಬೆಂಗಳೂರು: ಕೋರೋನಾ ಸೋಂಕು ನಿವಾರಣೆಯಲ್ಲಿ ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸರ ಮೇಲೆ ನಡೆಯುವ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. 

ನಗರದ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ರಜತ ಮಹೋತ್ಸವದಲ್ಲಿ ಆಶಯ ಭಾಷಣ ಮಾಡಿದ ಪ್ರಧಾನಿ,  ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಮಂಚೂಣಿ ಕಾರ್ಮಿಕರ ವಿರುದ್ಧ ಯಾವುದೇ ರೀತಿಯ ಹಿಂಸೆ, ನಿಂದನೆ ಮತ್ತು ಅಸಭ್ಯ ವರ್ತನೆ ಸ್ವೀಕಾರಾರ್ಹವಲ್ಲ. ಕೊರೋನಾ ಸೈನಿಕರನ್ನು ರಕ್ಷಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ಸೈನಿಕರಿಗೆ 50 ಲಕ್ಷ ರೂ ಮೊತ್ತದ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ಇವರೆಲ್ಲರೂ ಸಮವಸ್ತ್ರ ಇಲ್ಲದ ಸೈನಿಕರು. ಇವರು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಇದೇ ರೀತಿ ಕೊರೋನಾ ವೈರಸ್ ಸಹ ಗೋಚರಿಸುವುದಿಲ್ಲ. ನಾವು ಎರಡು ವಿಶ್ವ ಯುದ್ಧಗಳನ್ನು ನೋಡಿದ್ದೇವೆ. ಆದರೆ ಭಾರತ ಇದೀಗ ಕೋವಿಡ್ 19 ಸೋಂಕು ವಿರುದ್ಧ ಹೋರಾಟ ಮಾಡುತ್ತಿದೆ. ಕಣ್ಣಿಗೆ ಕಾಣದೇ ಉಪದ್ರವ ಕೊಡುತ್ತಿರುವ ವೈರಸ್ ವಿರುದ್ಧದ ಯುದ್ಧದಲ್ಲಿ ನಮ್ಮ ಸೈನಿಕರು ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕಳೆದ ಆರು ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಮಾಡಿದ್ದು, ಪ್ರಮುಖ ನಾಲ್ಕು ಅಂಶಗಳಿಗೆ ಆದ್ಯತೆ ನೀಡಿದೆ. ಅದರಲ್ಲಿ ರೋಗಬಾರದಂತೆ ತಡೆಯುವುದು ಪ್ರಮುಖವಾಗಿದ್ದು, ಯೋಗ, ಆಯುರ್ವೇದ ವಲಯಕ್ಕೆ ಒತ್ತು ನೀಡಿದೆ. ದೇಶದಲ್ಲಿ 40 ಸಾವಿರ ವೆಲ್ ನೆಸ್ ಕೇಂದ್ರಗಳನ್ನು ತೆರೆಯಲಾಗಿದ್ದು, ಮೂಲಕ ಜೀವನ ಶೈಲಿಯಿಂದ ಬರುವ ರೋಗಗಳ ನಿಯಂತ್ರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು. ಸ್ವಚ್ಛ ಭಾರತ್ ಅಭಿಯಾನದ ಯಶಸ್ಸಿನಿಂದಲೂ ರೋಗ ನಿಯಂತ್ರಣಕ್ಕೆ ಆದ್ಯತೆ ದೊರೆತಿದೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತಿದ್ದು, ನಮ್ಮ ಸರ್ಕಾರ ದೇಶಾದ್ಯಂತ 22 ಎಮ್ಸ್ ಮಾದರಿಯ ವೈದ್ಯಕೀಯ ಕಾಲೇಜುಗಳನ್ನು ತೆರೆದಿದೆ. ಎಂ.ಬಿ.ಬಿ.ಎಸ್ ನಲ್ಲಿ 30 ಸಾವಿರ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದಲ್ಲಿ 15 ಸಾವಿರ ಸೀಟುಗಳನ್ನು ಹೆಚ್ಚಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೆ ವೈದ್ಯಕೀಯ ಶಿಕ್ಷಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ವೈದ್ಯಕೀಯ ಕ್ಷೇತ್ರಕ್ಕೆಸಂಬಂಧಿಸಿದಂತೆ 50 ಕ್ಕೂ ಹೆಚ್ಚು ವೃತ್ತಿಪರರನ್ನು ಒಳಗೊಂಡಂತೆ ಹೊಸ ಕಾನೂನು ಜಾರಿಗೆ ತರುತ್ತಿದ್ದು, ಇದು ಅನುಮೋದನೆಗೊಂಡರೆ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ನಿವಾರಣೆಯಾಗಲಿದೆ ಎಂದರು, 

ಸರ್ಕಾರ ಆಧುನಿಕ ವೈದ್ಯಕೀಯ ಚಿಕಿತ್ಸೆಗೆ ಒತ್ತು ನೀಡುತ್ತಿದ್ದು, ಬರುವ ದಿನಗಳಲ್ಲಿ ಟೆಲಿ ಮೆಡಿಸನ್ ಪದ್ಥತಿಯನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸಲು ಉದ್ದೇಶಿಸಿದೆ. ಜತೆಗೆ ಆರೋಗ್ಯ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾಗೆ ಒತ್ತು ನೀಡುತ್ತಿದ್ದು, ದೇಶದ ಕೊರೋನಾ ವಾರಿಯರ್ಸ್ ಗೆ ಒಂದು ಕೋಟಿ ಪಿಪಿಇ ಕಿಟ್ ಗಳು, 1.20 ಕೋಟಿ ಎನ್ 95 ಮಾಸ್ಕ್ ಗಳನ್ನು ವಿತರಿಸಲಾಗಿದೆ. 12 ಕೋಟಿ ಮಂದಿ ಆರೋಗ್ಯ ಸೇತು ಆಪ್ಯ್ ಡೌನ್ ಲೋಡ್ ಮಾಡಿಕೊಂಡಿರುವುದು ಸಹ ಮತ್ತೊಂದು ಮಹತ್ವದ ಬೆಳವಣಿಗೆ ಎಂದು ನರೇಂದ್ರ ಮೋದಿ ಹೇಳಿದರು. ರಾಜೀವ್ ಗಾಂಧಿ ವಿ.ವಿ. ಅದ್ಭುತವಾದ ಕೆಲಸ ಮಾಡಿದೆ.25 ವರ್ಷಗಳ ಬೋಧನೆ, ತರಬೇತಿ, ಸಹಸ್ರಾರು ವೈದ್ಯರನ್ನು ನಿರ್ಮಿಸುವ ಮೂಲಕ ತನ್ನ ಯಶೋಗಾಥೆ ನಿರ್ಮಿಸಿದೆ. ದೇಶದ ವೈದ್ಯಕೀಯ ವಲಯದಲ್ಲಿ ಮತ್ತಷ್ಟು ಸೇವೆ ಸಲ್ಲಿಸಲಿ ಎಂದು ಪ್ರಧಾನಿ ಆಶಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com