ವಿಸ್ಕಿ ಬಾಟಲ್ ವಿವಾದ: ಗೃಹ ಸಚಿವಾಲಯದ ಮಾಧ್ಯಮ ಘಟಕಗಳು ಬೇರೆ ಇಲಾಖೆಗೆ ವರ್ಗಾವಣೆ
ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಚಂಡಮಾರುತ ನಂತರ ಕೇಂದ್ರ ರಕ್ಷಣಾ ಮೀಸಲು ಪಡೆ ಕೈಗೊಂಡಿದ್ದ ಕೆಲಸಗಳ ಬಗ್ಗೆ ಫೋಟೋ ಹಾಕುವ ಮಧ್ಯೆ ಮದ್ಯದ ಬಾಟಲ್ ಗಳ ಫೋಟೋಗಳನ್ನು ಕೇಂದ್ರ ಗೃಹ ಸಚಿವಾಲಯದ ಫೇಸ್ ಬುಕ್ ಪೇಜ್ ನಲ್ಲಿ ಶೇರ್ ಮಾಡಿ ವಿವಾದ ಸೃಷ್ಟಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಎಲ್ಲಾ ಮಾಧ್ಯಮ ತಂಡವನ್ನು ಸರ್ಕಾರದ ಬೇರೆ ಇಲಾಖೆಗಳಿಗೆ ವರ್ಗಾಯಿಸಲಾಗಿದೆ.
ಗೃಹ ಸಚಿವಾಲಯದ ವಕ್ತಾರರ ಹೊಸ ತಂಡದ ಉಸ್ತುವಾರಿಯನ್ನು ಹಿರಿಯ ಮಾಹಿತಿ ಸೇವಾ ಅಧಿಕಾರಿ ನಿತಿನ್ ಡಿ ವಾಕಾಂಕರ್ ಅವರಿಗೆ ವಹಿಸಲಾಗಿದೆ. ಹಿಂದಿನ ಸಿಬಿಐ ಮುಖ್ಯಸ್ಥರಾಗಿದ್ದ ಅಲೋಕ್ ವರ್ಮಾ ಮತ್ತು ಉಪ ಮುಖ್ಯಸ್ಥ ರಾಕೇಶ್ ಅಸ್ತಾನಾ ಮಧ್ಯೆ ಜಗಳಗಳು ನಡೆಯುತ್ತಿದ್ದ ಸಂದರ್ಭದಲ್ಲಿ ನಿತಿನ್ ವಾಕಾಂಕರ್ ಸುದ್ದಿಯಾಗಿದ್ದರು.
ಗೃಹ ಸಚಿವಾಲಯದ ಮಾಧ್ಯಮ ವಕ್ತಾರರಾಗಿದ್ದ ವಸುಧಾ ಗುಪ್ತಾ ಅವರನ್ನು ಮಾಧ್ಯಮ ಮಾಹಿತಿ ವಿಭಾಗದ ಮಹಾ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಗುಪ್ತಾ ಮತ್ತು ವಾಕಾಂಕರ್ ಇಬ್ಬರೂ ಡಿಜಿ ರ್ಯಾಂಕ್ ಮಟ್ಟದ ಅಧಿಕಾರಿಗಳಾಗಿದ್ದಾರೆ. 1989ರ ಸಾಲಿನ ಐಐಎಸ್ ಅಧಿಕಾರಿ ವಾಕಾಂಕರ್ ಪಿಐಬಿಯಲ್ಲಿಯೇ ಈ ಹಿಂದೆ ಮಹಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ