ಪೆಟ್ರೋಲ್, ಡೀಸೆಲ್ ಜಿಎಸ್‍ಟಿಯಡಿ ತನ್ನಿ, ದರ ಏರಿಕೆ ಹಿಂಪಡೆಯಿರಿ: ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಡಿಗೆ ಇಂಧನಗಳನ್ನೂ ತರುವಂತೆ ಕೇಂದ್ರಕ್ಕೆ ಒತ್ತಾಯಿಸಿರುವ ಕಾಂಗ್ರೆಸ್, ಕಚ್ಚಾ ತೈಲಗಳ ಅಗ್ಗದ ಲಾಭವನ್ನು ಜನರಿಗೆ ತಲುಪಿಸುವಂತೆ ಆಗ್ರಹಿಸಿದೆ.
ಆಗಸ್ಟ್ 2004ರ ಮಟ್ಟಕ್ಕೆ ಪೆಟ್ರೋಲ್-ಡೀಸೆಲ್-ಅಡುಗೆ ಅನಿಲದ ದರವನ್ನು ಇಳಿಸಬೇಕೆಂದೂ ಸಹ ಕಾಂಗ್ರೆಸ್ ಒತ್ತಾಯಿಸಿದೆ.
‘ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಮೋದಿ ಸರ್ಕಾರ 2014ರ ಮೇ ತಿಂಗಳಿನಿಂದ ಅಬಕಾರಿ ಸುಂಕವನ್ನು 12 ಬಾರಿ ಹೆಚ್ಚಿಸಿದೆ. ಇಂಧನಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವವರೆಗೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು.’ ಎಂದು ಎಐಸಿಸಿ ಸಂವಹನ ವಿಭಾಗದ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಆಗ್ರಹಿಸಿದ್ದಾರೆ.
ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 40 ಡಾಲರ್‌ಗೆ ಇಳಿದರೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಹೆಚ್ಚಿನ ದರಕ್ಕೆ ಏಕೆ ಮಾರಾಟ ಮಾಡಲಾಗುತ್ತಿದೆ? ಎಂದು ಸುರ್ಜೇವಾಲಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
"ಭಾರತಕ್ಕೆ ಲೀಟರ್‌ಗೆ 20 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿರುವ ಪೆಟ್ರೋಲ್ ಅನ್ನು ಲೀಟರ್ ಗೆ 75.78 ರೂ. ಮತ್ತು ಡೀಸೆಲ್ ಅನ್ನು 74.03 ರೂ.ಗೆ ಏಕೆ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ವಿವರಿಸಬೇಕು ಎಂದು ಸರ್ಜೇವಾಲಾ ಒತ್ತಾಯಿಸಿದ್ದಾರೆ.

