ತಿರುವನಂತಪುರಂ: ಚೀನಾ- ಭಾರತದ ನಡುವೆ ಗಲ್ವಾನ್ ಕಣಿವೆಯಲ್ಲಿ ಯುದ್ಧ ರೀತಿಯ ಸನ್ನಿವೇಶ ನಿರ್ಮಾಣವಾಗಿದ್ದರ ಬೆನ್ನಲ್ಲೇ ಕೇರಳದ ಗ್ರಾಮದಲ್ಲಿರುವ ಚೀನಾ ಮುಕ್ಕು ಎಂಬ ಪ್ರದೇಶದ ಹೆಸರನ್ನು ಬದಲಾವಣೆ ಮಾಡಲು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಈ ಗ್ರಾಮದಲ್ಲಿರುವ ಚೀನಾ ಮುಕ್ಕು (ಚೀನಾ ಜಂಕ್ಷನ್) ಎಂಬ ಹೆಸರನ್ನು ನೀಡಿದ್ದು ಭಾರತದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು! 1952 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ಕೇರಳದ ಈ ಗ್ರಾಮಕ್ಕೆ ಭೇಟಿ ನೀಡಿದ್ದ ನೆಹರು ಅವರಿಗೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕಮ್ಯುನಿಸ್ಟರ ಕೆಂಪು ಬಣ್ಣದ ಧ್ವಜಗಳೇ ರಾರಾಜಿಸುತ್ತಿದ್ದವು. ಇದನ್ನು ಗಮನಿಸಿದ ನೆಹರು ಈ ಪ್ರದೇಶವನ್ನು ಚೀನಾ ಮುಕ್ಕು (ಚೀನಾ ಜಂಕ್ಷನ್) ಎಂದು ಕರೆದಿದ್ದರು. ಅಂದಿನಿಂದ ಇಂದಿನವರೆಗೂ ಅದೇ ಹೆಸರು ಈ ಪ್ರದೇಶಕ್ಕೆ ಅಂಟಿಕೊಂಡಿದೆ. ಈಗ ಚೀನಾದೊಂದಿಗಿನ ಘರ್ಷಣೆಯ ಬೆನ್ನಲ್ಲೇ ಕೇರಳದ ಗ್ರಾಮಸ್ಥರು ಈ ಹೆಸರನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು, ಹೆಸರು ಬದಲಾವಣೆ ಸಂಬಂಧ ನಿರ್ಣಯ ಮಂಡಿಸಿದ್ದೇವೆ, ಇದಕ್ಕಾಗಿ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ. ಭಾರತ-ಚೀನಾ ಗಡಿ ಪ್ರದೇಶದಲ್ಲಿ ಯುದ್ಧದ ರೀತಿಯ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು, ಯೋಧರ ಬಲಿದಾನವನ್ನು ಗೌರವಿಸಿ ಹೆಸರು ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪಂಚಾಯತ್ ನ ಅಧ್ಯಕ್ಷರಾದ ಎಂ ರಜನಿ ಮಾತನಾಡಿ, ಶೀಘ್ರದಲ್ಲೇ ನಡೆಯಲಿರುವ ಪರಿಷತ್ ಸಭೆಯಲ್ಲಿ ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Advertisement