

ಶ್ರೀನಗರ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿ ಸಯೀದ್ ಅಲಿ ಗಿಲಾನಿ ಪ್ರತ್ಯೇಕತಾವಾದಿಗಳ ಸಂಘಟನೆಯಾದ ಹುರಿಯತ್ ಕಾನ್ಫರೆನ್ಸ್ ಗೆ ರಾಜೀನಾಮೆ ನೀಡಿದ್ದಾರೆ.
90 ವರ್ಷದ ಗಿಲಾನಿ ಅನಾರೋಗ್ಯದ ನಡುವೆ ಧ್ವನಿ ಸಂದೇಶದ ಮೂಲಕ ಹುರಿಯತ್ ಕಾನ್ಫರೆನ್ಸ್ ನಿಂದ ಹೊರನಡೆಯುತ್ತಿರುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈಗಿನ ಸಂದರ್ಭಗಳನ್ನು ಪರಿಗಣಿಸಿದ ಮೇಲೆ ನಾನು ಹುರಿಯತ್ ವೇದಿಕೆಯಿಂದ ಹೊರ ನಡೆಯುತ್ತಿದ್ದೇನೆ ಎಂದು ಧ್ವನಿ ಸಂದೇಶದಲ್ಲಿ ಗಿಲಾನಿ ತಿಳಿಸಿದ್ದು ಎರಡು ಪುಟಗಳ ಪತ್ರವನ್ನೂ ಪ್ರಕಟಿಸಿದ್ದಾರೆ.
ಗಿಲಾನಿ ಪಾಕಿಸ್ತಾನದ ಪರವಾದ ನಿಲುವುಗಳನ್ನು ಹೊಂದಿರುವ ಪ್ರತ್ಯೇಕತಾವಾದಿಯಾಗಿದ್ದು, ಕಟ್ಟರ್ ಪ್ರತ್ಯೇಕತಾವಾದಿ ಗುಂಪನ್ನು ಗಿಲಾನಿ ಮುನ್ನಡೆಸುತ್ತಿದ್ದರು.
2018 ರ ಮಾರ್ಚ್ ತಿಂಗಳಲ್ಲಿ ಗಿಲಾನಿ ತಮ್ಮದೇ ಆದ ಪ್ರತ್ಯೇಕತಾವಾದಿ ಪಕ್ಷ ತೆಹ್ರೀಕ್-ಎ-ಹುರಿಯತ್ ನ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದರು. ಬಳಿಕ ಗಿಲಾನಿ ಅವರ ಆಪ್ತ ಮೊಹಮ್ಮದ್ ಅಶ್ರಫ್ ಸೆಹ್ರಾಯ್ ಟಿಇಎಚ್ ನ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಈಗ ಗಿಲಾನಿ ನಿರ್ಗಮನದ ಬಳಿಕ ಹುರಿಯತ್ ಕಾನ್ಫರೆನ್ಸ್ ನ ಮುಖ್ಯಸ್ಥನಾಗಿ ಮೊಹಮ್ಮದ್ ಅಶ್ರಫ್ ಸೆಹ್ರಾಯ್ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Advertisement