ಯಸ್ ಬ್ಯಾಂಕ್ ಆರ್ಥಿಕ ಬಿಕ್ಕಟ್ಟು: ಬಿಜೆಪಿ-ಕಾಂಗ್ರೆಸ್ ಮಧ್ಯೆ ಟ್ವೀಟ್ ವಾರ್!
ನವದೆಹಲಿ: ದೇಶದ ಆರ್ಥಿಕ ಬಿಕ್ಕಟ್ಟು ಕುರಿತು ಮತ್ತೊಮ್ಮೆ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವಾಗ್ಯುದ್ಧಕ್ಕೆ ಕಾರಣವಾಯಿತು.
ಭಾರತದಲ್ಲಿ ಪ್ರತಿಯೊಂದು ಹಣಕಾಸು ಬಿಕ್ಕಟ್ಟಿಗೆ ಗಾಂಧಿ ಕುಟುಂಬದ ಆಳವಾದ ಸಂಬಂಧವಿದೆ ಎಂದು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದರು.
ಅದಕ್ಕೆ ಕಾಂಗ್ರೆಸ್ ತಿರುಗೇಟು ನೀಡಿ, 2014ರ ನಂತರ ಯಸ್ ಬ್ಯಾಂಕಿನ ಸಾಲದ ಹೊರೆ ಬಹಿರಂಗವಾಗಿದ್ದು ಪ್ರಧಾನಿ ಮತ್ತು ಹಣಕಾಸು ಸಚಿವೆ ತೊಡಕಿನಲ್ಲಿದ್ದಾರೆ ಎಂದು ಅನಿಸುತ್ತದೆ ಎಂದು ಹೇಳಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಎಂ ಎಫ್ ಹುಸೇನ್ ಅವರ ಚಿತ್ರಕಲೆಯನ್ನು ಯಸ್ ಬ್ಯಾಂಕ್ ಸ್ಥಾಪಕ ಕಪೂರ್ ಅವರಿಗೆ 2 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದು ಅದನ್ನು 2010ರಲ್ಲಿ ಸಲ್ಲಿಸಿದ್ದ ಆದಾಯ ತೆರಿಗೆಯಲ್ಲಿ ಬಹಿರಂಗಪಡಿಸಿದ್ದಾರೆ ಎಂದಿದೆ.
ಕೇಂದ್ರ ಸರ್ಕಾರ ಪ್ರತಿಯೊಂದು ಸಮಸ್ಯೆ ಬಂದಾಗಲೂ ಅದರಿಂದ ಜನರ ಮನಸ್ಸನ್ನು ವಿಮುಖ ಮಾಡಲು ನೋಡುತ್ತದೆ. ಯಸ್ ಬ್ಯಾಂಕಿನ ಸಾಲದ ಹೊರೆ 2014ರ ಮಾರ್ಚ್ ತಿಂಗಳಲ್ಲಿ 55 ಸಾವಿರದ 633 ರೂಪಾಯಿಗಳಿದ್ದರೆ 2019ರಲ್ಲಿ 2 ಲಕ್ಷದ 41 ಸಾವಿರದ 499 ರೂಪಾಯಿಗಳಿಗೆ ಏರಿಕೆಯಾಗಿದೆ. ನೋಟುಗಳ ಅನಾಣ್ಯೀಕರಣದ ನಂತರ ಸಾಲದ ಹೊರೆ ಕೇವಲ ಎರಡು ವರ್ಷಗಳಲ್ಲಿ ದುಪ್ಪಟ್ಟಾಗಿದೆ, ಈ ಸಂದರ್ಭದಲ್ಲಿ ಪ್ರಧಾನಿ ಮತ್ತು ಹಣಕಾಸು ಸಚಿವರು ನಿದ್ದೆ ಮಾಡುತ್ತಿದ್ದರೇ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಕೇಳಿದ್ದಾರೆ.
62 ವರ್ಷದ ಯಸ್ ಬ್ಯಾಂಕ್ ಸ್ಥಾಪಕ ಕಪೂರ್ ಅವರನ್ನು ನಿನ್ನೆ ಮುಂಬೈಯಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿ ಇದೇ 11ರವರೆಗೆ ಕೋರ್ಟ್ ಕಸ್ಟಡಿಗೊಪ್ಪಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ