ಮಧ್ಯಪ್ರದೇಶ: ಸದನದ ಅಜೆಂಡಾದಲ್ಲಿ ವಿಶ್ವಾಸಮತ ಉಲ್ಲೇಖವಿಲ್ಲ, ರಾಜ್ಯಪಾಲರನ್ನು ಭೇಟಿಯಾದ ಪ್ರತಿಪಕ್ಷ ನಾಯಕ
ಭೋಪಾಲ್: ಸೋಮವಾರ ವಿಶ್ವಾಸಮತ ಯಾಚಿಸಲು ಮಧ್ಯಪ್ರದೇಶ ರಾಜ್ಯಪಾಲ ಲಾಲ್ ಜೀ ಟಂಡನ್ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ನಿರ್ದೇಶಿಸಿದ್ದಾರೆ. ಆದರೆ, ವಿಧಾನಸಭೆ ಸಚಿವಾಲಯ ಭಾನುವಾರ ರಾತ್ರಿ ಹೊರಡಿಸಿರುವ ವಿಧಾನಸಭೆ ಕಾರ್ಯಕಲಾಪ ಪಟ್ಟಿಯಲ್ಲಿ ವಿಶ್ವಾಸಮತ ಯಾಚನೆ ವಿಚಾರದ ಬಗ್ಗೆ ಉಲ್ಲೇಖವಿಲ್ಲ.
ಬಜೆಟ್ ಅಧಿವೇಶನದ ಮೊದಲ ದಿನ ಸಂಪ್ರದಾಯದಂತೆ ರಾಜ್ಯಪಾಲರ ಭಾಷಣ ಹಾಗೂ ವಂದನಾ ನಿರ್ಣಯ ಬಗ್ಗೆಯಷ್ಟೇ ವಿಧಾನಸಭಾ ಕಾರ್ಯಕಲಾಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಪದೇ ಪದೇ ಪ್ರಯತ್ನಿಸಿದ್ದರೂ ವಿಧಾನಸಭೆ ಪ್ರಧಾನ ಕಾರ್ಯದರ್ಶಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆದಾಗ್ಯೂ, ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರಾದರೆ ಸ್ಪೀಕರ್ ವಿಧಾನಸಭೆಯ ಮುಖ್ಯಸ್ಥರಾಗಿದ್ದು, ತಮ್ಮ ವಿವೇಚನೆಗೆ ತಕ್ಕಂತೆ ಎಲ್ಲಾ ಅಧಿಕಾರವನ್ನು ಹೊಂದಿದ್ದಾರೆ ಎಂದು ಮಾಜಿ ಸಚಿವ ಚೌದರಿ ರಾಕೇಶ್ ಸಿಂಗ್ ಚತುರ್ವೇದಿ ಹೇಳಿದ್ದಾರೆ.
ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾದ ನಂತರ ಅವರ ಆಪ್ತರಾದ 22 ಮಂದಿ ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಮುಖ್ಯಮಂತ್ರಿ ಕಮಲ್ ನಾಥ್ ಸೋಮವಾರ ವಿಶ್ವಾಸಮತಯಾಚಿಸುವಂತೆ ರಾಜ್ಯಪಾಲರು ಶನಿವಾರ ರಾತ್ರಿ ನಿರ್ದೇಶನ ನೀಡಿದ್ದರು.
ಈ ಮಧ್ಯೆ ವಿಧಾನಸಭೆ ಕಾರ್ಯಕಲಾಪ ಪಟ್ಟಿ ಬಿಡುಗಡೆಯಾದ ನಂತರ ಪ್ರತಿಪಕ್ಷ ನಾಯಕ ಗೋಪಾಲ್ ಭಾರ್ಗವ ಭಾನುವಾರ ರಾತ್ರಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.
ಕಾಂಗ್ರೆಸ್ ವಿಶ್ವಾಸಮತ ಯಾಚನೆಯಿಂದ ತಪ್ಪಿಸಿಕೊಳ್ಳಲು ಬಯಸಿದೆ. ರಾಜ್ಯ ವಿಧಾಸನಭೆ ಅಜೆಂಡಾದಲ್ಲಿ ವಿಶ್ವಾಸಮತಯಾಚನೆ ಬಗ್ಗೆ ಉಲ್ಲೇಖ ಇಲ್ಲದಿರುವ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ ಮಾಡಿದ್ದೇವೆಯ ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ಭಾರ್ಗವ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ