ನಿರ್ಭಯಾ ಹತ್ಯಾಚಾರಿಗಳ ಮೃತದೇಹ ಕುಟುಂಬಕ್ಕೆ ಹಸ್ತಾಂತರ
ನವದೆಹಲಿ: ನಾಲ್ವರು ನಿರ್ಭಯಾ ಹತ್ಯಾಚಾರಿಗಳ ಮೃತದೇಹವನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತಿಮ ಸಂಸ್ಕಾರ ನಡೆಸಲು ಅವರ ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಇಂದು ಬೆಳಗ್ಗೆ 5-30ರಲ್ಲಿ ಅಪರಾಧಿಗಳಾದ ಮುಕೇಶ್ ಸಿಂಗ್ (32) ಪವನ್ ಗುಪ್ತಾ (25) ವಿನಯ್ ಶರ್ಮಾ (26) ಹಾಗೂ ಅಕ್ಷಯ್ ಸಿಂಗ್ (31) ಅವರನ್ನು ಗಲ್ಲಿಗೇರಿಸಲಾಗಿತ್ತು.
ಕಾರಾಗೃಹದ ನಿಯಮದ ಪ್ರಕಾರ ಗಲ್ಲಿಗೇರಿಸಿದ ಬಳಿಕ ಅರ್ಧಗಂಟೆಗಳ ಕಾಲ ಮೃತದೇಹವನ್ನು ನೇತುಹಾಕಲಾಗಿತ್ತು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ವೈದ್ಯರು ಮೃತದೇಹವನ್ನು ಪರೀಕ್ಷಿಸಿದ ನಂತರ ಎಲ್ಲರೂ ಮೃತಪಟ್ಟಿರುವುದು ಕಂಡುಬಂದಿತು. ನಂತರ ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಯಿತು. ಬಳಿಕ ಅವರ ಕುಟುಂಬದವರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಯಿತು ಎಂದು ತಿಹಾರ್ ಜೈಲು ಮಹಾನಿರ್ದೇಶಕ ಸಂದೀಪ್ ಗೋಯೆಲ್ ಮಾಹಿತಿ ನೀಡಿದ್ದಾರೆ.
ಅಕ್ಷಯ್ ಮೃತದೇಹವನ್ನು ಬಿಹಾರದ ಔರಾಂಗಾಬಾದಿನ ಆತನ ಹಳ್ಳಿಗೆ ತೆಗೆದುಕೊಂಡು ಹೋಗಲಾಗಿದೆ. ಮುಕೇಶ್ ಮೃತದೇಹವನ್ನು ರಾಜಸ್ತಾನ, ವಿನಯ್ ಹಾಗೂ ಪವನ್ ಮೃತದೇಹವನ್ನು ದಕ್ಷಿಣ ದೆಹಲಿಯಲ್ಲಿನ ಅವರ ನಿವಾಸ ರವಿದಾಸ್ ಕ್ಯಾಂಪ್ ಗೆ ತೆಗೆದುಕೊಂಡು ಹೋಗಲಾಯಿತು ಎಂದು ಅವರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಗೂ ಮುನ್ನವೇ ಕುಟುಂಬ ಸದಸ್ಯರು ದಿನ ದಯಾಳ್ ಆಸ್ಪತ್ರೆಗೆ ಬಂದಿದ್ದರು.
ಆಸ್ಪತ್ರೆಯ ಶವಾಗಾರದ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಗಲ್ಲುಶಿಕ್ಷೆಗೊಳಗಾದವರ ಕುಟುಂಬಸ್ಥರು, ಸಂಬಂಧಿಕರನ್ನು ಹೊರತುಪಡಿಸಿ ಬೇರೆ ಯಾರಿಗೂ ಅಲ್ಲಿ ಪ್ರವೇಶ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ತಿಹಾರ್ ಜೈಲಿನಲ್ಲಿ ನಾಲ್ವರು ಅಪರಾಧಿಗಳನ್ನು ಒಟ್ಟಿಗೆ ನೇಣಿಗೇರಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ