ಬಾಯ್ಸ್ ಲಾಕರ್ ರೂಮ್ ಪ್ರಕರಣ: ದೆಹಲಿ ಪೊಲೀಸರಿಂದ ಇನ್ಸ್ಟಾಗ್ರಾಮ್ ಗ್ರೂಪ್ ಅಡ್ಮಿನ್ ಬಂಧನ
ನವದೆಹಲಿ: ಬಾಯ್ಸ್ ಲಾಕರ್ ರೂಮ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ದೆಹಲಿ ಪೊಲೀಸರು, ಬಾಯ್ಸ್ ಲಾಕರ್ ರೂಮ್ ಇನ್ಸ್ಟಾಗ್ರಾಮ್ ಚಾಟ್ ಗ್ರೂಪ್ ಅಡ್ಮಿನ್ ನನ್ನು ಬುಧವಾರ ಬಂಧಿಸಿದ್ದಾರೆ.
ಇನ್ಸ್ಟಾಗ್ರಾಮ್ ಖಾಸಗಿ ಗ್ರೂಪ್ ನಲ್ಲಿ ಯುವತಿಯರ ಆಕ್ಷೇಪಾರ್ಹ ಫೋಟೊಗಳನ್ನು ಹಂಚಿ, ಅತ್ಯಾಚಾರವನ್ನು ವೈಭವೀಕರಿಸುವುದಕ್ಕೆ ಸಂಬಂಧಿಸಿದಂತೆ ದೆಹಲಿ ಸೈಬರ್ ಘಟಕದ ಪೊಲೀಸರು ಈಗಾಗಲೇ ಶಾಲಾ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದಾರೆ.
ದಕ್ಷಿಣ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರ 15 ವರ್ಷದ ವಿದ್ಯಾರ್ಥಿ ಬಂಧಿತನಾಗಿದ್ದು, ಇತರ 22 ಬಾಲಕರನ್ನು ಗುರುತಿಸಲಾಗಿದ್ದು, ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ, ಬಂಧಿತ ಆರೋಪಿಯನ್ನು ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಇನ್ಸ್ಟಾಗ್ರಾಮ್ ಚಾಟ್ ಗ್ರೂಪಿನಲ್ಲಿ ಸೋರಿಕೆಯಾದ ಸ್ಕ್ರೀನ್ ಶಾಟ್ ಗಳು ದೇಶದಲ್ಲಿ ಅತ್ಯಾಚಾರ ಸಂಸ್ಕ್ರೃತಿಯ ಬಿರುಗಾಳಿ ಎಬ್ಬಿಸಿತ್ತು. ಹಲವಾರು ಬಾಲಕರು ಅಪ್ರಾಪ್ತ ಬಾಲಕಿಯರ ಅಕ್ಷೇಪಾರ್ಹ ಪೋಟೋಗಳನ್ನು ಹಂಚಿಕೊಂಡಿದ್ದು, ಸಾಮೂಹಿಕ ಅತ್ಯಾಚಾರದ ಬಗ್ಗೆಯೂ ಮಾತನಾಡಿಕೊಂಡಿದ್ದಾರೆ.
ಈ ಸಂಬಂಧ ಐಪಿಸಿ ಸೆಕ್ಷನ್ 465( ವಂಚನೆ) 471 ( ನಕಲಿ ದಾಖಲೆ ಬಳಕೆ) 469 ( ವರ್ಚಸ್ಸಿಗೆ ಹಾನಿ ಮಾಡಲು ನಕಲಿ) 509 (
ಯಾವುದೇ ಮಹಿಳೆಯ ಗೌರವವನ್ನು ಅವಮಾನಿಸುವ ಉದ್ದೇಶ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ 67 ಮತ್ತು 67 ಸೆಕ್ಷನ್ ಅಡಿಯಲ್ಲಿ ದೆಹಲಿ ಸೈಬರ್ ಘಟಕದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ