ಬುದ್ಧನ ತತ್ವ, ಸಂದೇಶ ಇಂದಿನ ಸಂಕಷ್ಟದ ಪರಿಸ್ಥಿತಿಗೆ ಪ್ರಸ್ತುತ: ಪಿಎಂ ನರೇಂದ್ರ ಮೋದಿ

ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಸ್ವಾರ್ಥವಿಲ್ಲದೆ ವಿಶ್ವದ ಜತೆಗೆ ನಿಂತಿದೆ. ಇಡೀ ಜಗತ್ತು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಗವಾನ್ ಬುದ್ಧನ ತತ್ವ, ಸಂದೇಶ, ಬೋಧನೆಗಳು ಪ್ರಸ್ತುತವಾಗಿದ್ದು ಅದರಂತೆ ನಡೆಯಬೇಕಾಗಿದೆ.
ಬುದ್ಧ ಪೂರ್ಣಿಮೆ ಅಂಗವಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪಿಎಂ ನರೇಂದ್ರ ಮೋದಿ
ಬುದ್ಧ ಪೂರ್ಣಿಮೆ ಅಂಗವಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪಿಎಂ ನರೇಂದ್ರ ಮೋದಿ
Updated on

ನವದೆಹಲಿ: ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ಸ್ವಾರ್ಥವಿಲ್ಲದೆ ವಿಶ್ವದ ಜತೆಗೆ ನಿಂತಿದೆ. ಇಡೀ ಜಗತ್ತು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಭಗವಾನ್ ಬುದ್ಧನ ತತ್ವ, ಸಂದೇಶ, ಬೋಧನೆಗಳು ಪ್ರಸ್ತುತವಾಗಿದ್ದು ಅದರಂತೆ ನಡೆಯಬೇಕಾಗಿದೆ. ಭಾರತ ಈ ಸಂದರ್ಭದಲ್ಲಿ ಎಲ್ಲರ ನಿಸ್ವಾರ್ಥ ಸೇವೆಗೆ ಸದಾ ಸಿದ್ದ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ಬುದ್ಧ ಪೂರ್ಣಿಮೆ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿ ತಮ್ಮ ಮನದಾಳದ ಮಾತುಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನುಡಿದರು. ಕೊರೋನಾ ಸೋಂಕಿನ ಸಂಕಷ್ಟದ ಪರಿಸ್ಥಿತಿ ಸಂದರ್ಭದಲ್ಲಿ ನನಗೆ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ದೇಶವಾಸಿಗಳೊಂದಿಗೆ ಬುದ್ಧನ ತತ್ವ, ಬೋಧನೆ,ಸಂದೇಶಗಳನ್ನು ನೆನಪಿಸಿಕೊಳ್ಳಲು ನನಗೆ ಇಂದು ಸುದಿನ ಎಂದರು.

ಮೋದಿಯವರು ಹೇಳಿದ್ದೇನು?: ಬುದ್ಧ ಭಾರತದ ಸಾಕ್ಷಾತ್ಕಾರ ಮತ್ತು ಸ್ವಯಂ ಸಾಕ್ಷಾತ್ಕಾರ ಎರಡರ ಸಂಕೇತವಾಗಿದೆ. ಈ ಸ್ವಯಂ ಸಾಕ್ಷಾತ್ಕಾರದ ಮೂಲಕ ಮಾನವ ಸಮುದಾಯದ, ಇಡೀ ವಿಶ್ವದ ಹಿತಾಸಕ್ತಿಗೆ ಭಾರತ ಕೆಲಸ ಮಾಡುತ್ತಿದ್ದು  ಅದನ್ನು ಮುಂದುವರಿಸಲಿದೆ. ಜನರ ಸೇವೆ ಮಾಡಿ ಸಾಕಾಯಿತು, ಬಳಲಿ ಹೋಯಿತು ಎಂದು ಕೂರುವ ಸಮಯ ಇದಲ್ಲ. ನಾವೆಲ್ಲರೂ ಒಟ್ಟಾಗಿ ಹೋರಾಡಿ ಕೊರೋನಾ ವೈರಸ್ ನ್ನು ಮಟ್ಟಹಾಕಲೇಬೇಕು, ಇದಕ್ಕೆ ಎಲ್ಲರ ಸಹಕಾರ ಬೇಕು.

ಭಾರತ ದೇಶ ಇಂದು ಯಾವುದೇ ಧರ್ಮ, ಭಾಷೆ, ದೇಶ ಎಂದು ತಾರತಮ್ಯ ನೋಡದೆ ಎಲ್ಲರ ಸಹಕಾರ, ಬೆಂಬಲಕ್ಕೆ ನಿಂತಿದೆ. ಯಾರಿಗೆ ಅಗತ್ಯವಿದೆ, ಯಾರಿಗೆ ಸಮಸ್ಯೆಯಿದೆ, ಯಾವ ದೇಶದಲ್ಲಿ ಸಮಸ್ಯೆಯಿದೆ ಅವರಿಗೆ ನಮ್ಮ ಕಡೆಯಿಂದ ಏನು ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ.

ಕೊರೋನಾ ವೈರಸ್ ಸಂಕಷ್ಟದ ಸಮಯದಲ್ಲಿ ನಮ್ಮ ಸುತ್ತಮುತ್ತಲಿರುವ ಹಲವರು ಬೇರೆಯವರ ಆರೋಗ್ಯ, ಸುರಕ್ಷತೆಗಾಗಿ ದುಡಿಯುತ್ತಿದ್ದಾರೆ. ಕಾನೂನು, ಸುವ್ಯವಸ್ಥೆ ಕಾಪಾಡಲು, ಸೋಂಕಿತ ವ್ಯಕ್ತಿಗಳನ್ನು ಗುಣಪಡಿಸಲು, ಸ್ವಚ್ಛತೆ ಕಾಪಾಡಲು ತಮ್ಮ ಸುಖವನ್ನು ತ್ಯಾಗ ಮಾಡಿ 24 ಗಂಟೆ ದುಡಿಯುತ್ತಿದ್ದಾರೆ. ಅಂಥವರು ನಿಜಕ್ಕೂ ಈ ಸಮಯದಲ್ಲಿ ಶ್ಲಾಘನೆ, ಅಭಿನಂದನೆಗೆ ಅರ್ಹರು.

ಜೀವನದ ಸಮಸ್ಯೆಗಳನ್ನು ಕಡಿಮೆ ಮಾಡುವ ಸಂದೇಶ ಮತ್ತು ಸಂಕಲ್ಪವು ಭಾರತದ ಸಂಸ್ಕೃತಿಗೆ ಮಾರ್ಗದರ್ಶನ ನೀಡಿದೆ. ಭಗವಾನ್ ಬುದ್ಧ ಭಾರತೀಯ ನಾಗರಿಕತೆ ಮತ್ತು ಸಂಪ್ರದಾಯದ ಸಮೃದ್ಧಿಗೆ ಕೊಡುಗೆ ನೀಡಿದರು. ಬುದ್ಧನು ತನ್ನದೇ ಆದ ಬೆಳಕಾಗಿ ಮಾರ್ಪಟ್ಟು ತನ್ನ ಜೀವನ ಪಯಣದಲ್ಲಿ ಇತರರ ಜೀವನವನ್ನು ಬೆಳಗಿದವನು ಎಂದು ಪ್ರಧಾನಿ ಮೋದಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com