ಮೇ 25 ರಿಂದ ದೇಶಿಯ ವಿಮಾನ ಹಾರಾಟ: ವಿಮಾನ ನಿಲ್ದಾಣದಲ್ಲಿ ಏನು ಮಾಡಬೇಕು, ಏನು ಮಾಡಬಾರದು?

ದೇಶೀಯ ವಿಮಾನಗಳ ಹಾರಾಟ ಇದೇ ತಿಂಗಳ 25ರಿಂದ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಗುರುವಾರ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು(ಎಸ್ ಒಪಿ) ಹೊರಡಿಸಿದೆ. ಅದರ ಪ್ರಕಾರ 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಹೊರತುಪಡಿಸಿ ಉಳಿದ ಪ್ರಯಾಣಿಕರು ಆರೋಗ್ಯ ಸೇತು ಆಪ್ ನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಬೇಕು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೇಶೀಯ ವಿಮಾನಗಳ ಹಾರಾಟ ಇದೇ ತಿಂಗಳ 25ರಿಂದ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಗುರುವಾರ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು(ಎಸ್ ಒಪಿ) ಹೊರಡಿಸಿದೆ. ಅದರ ಪ್ರಕಾರ 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಹೊರತುಪಡಿಸಿ ಉಳಿದ ಪ್ರಯಾಣಿಕರು ಆರೋಗ್ಯ ಸೇತು ಆಪ್ ನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಬೇಕು.

ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಮುನ್ನ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್, ಪ್ರಯಾಣಿಕರ ಲಗ್ಗೇಜು ಟರ್ಮಿನಲ್ ಗೆ ಪ್ರವೇಶಿಸುವ ಮುನ್ನ ಶುಚಿಗೊಳಿಸುವುದು ಕೂಡ ಈ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದೆ.

ಹಾಗಾದರೆ ದೇಶೀಯ ವಿಮಾನಗಳಲ್ಲಿ ಹಾರಾಟಕ್ಕೆ ಪ್ರಯಾಣಿಕರು ಅನುಸರಿಸಬೇಕಾದ ಹೊಸ ಎಸ್ಒಪಿಗಳೇನು ಎಂಬುದನ್ನು ನೋಡೋಣ ಬನ್ನಿ:

-ದೃಢಪಟ್ಟ ವೆಬ್ ಚೆಕ್ -ಇನ್ ಆದ ಪ್ರಯಾಣಿಕರಿಗೆ ಮಾತ್ರ ವಿಮಾನ ನಿಲ್ದಾಣದೊಳಗೆ ಪ್ರವೇಶಕ್ಕೆ ಅನುಮತಿಯಿದೆ. ಕೌಂಟರ್ ಗಳಲ್ಲಿ ಶಾರೀರಿಕ ಚೆಕ್ ಇನ್ ಇರುವುದಿಲ್ಲ.

--ಪ್ರಯಾಣಿಕರು ವಿಮಾನ ಹೊರಡುವುದಕ್ಕೆ ಒಂದು ಗಂಟೆ ಮೊದಲು ನಿಲ್ದಾಣಕ್ಕೆ ತಲುಪಿರಬೇಕು. ವಿಮಾನ ಹಾರಾಟಕ್ಕೆ 20 ನಿಮಿಷ ಮೊದಲು ಗೇಟ್ ಮುಚ್ಚುತ್ತದೆ.

-ಒಂದು ಚೆಕ್ ಇನ್ ಬ್ಯಾಗಿಗೆ ಮಾತ್ರ ಅವಕಾಶವಿರುತ್ತದೆ. ವಿಮಾನಗಳಲ್ಲಿ ಪ್ರಯಾಣಿಕರಿಗೆ ಆಹಾರ, ತಿಂಡಿ-ಪಾನೀಯಗಳ ಸೇವೆ ಒದಗಿಸುವುದಿಲ್ಲ.

-ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರವು ನಿಗದಿಪಡಿಸಿದ ದರ ಮತ್ತು ಮಿತಿಯನ್ನು ವಿಮಾನಯಾನ ಸಂಸ್ಥೆಗಳು ಅನುಸರಿಸಬೇಕು.

-ವಿಮಾನ ಹೊರಡುವುದಕ್ಕೆ ಕನಿಷ್ಠ ಎರಡು ಗಂಟೆ ಮೊದಲು ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಇರುವಂತೆ ಸಂಸ್ಥೆ ಮಾಹಿತಿ ನೀಡಬೇಕು.

-14 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯವಲ್ಲ.

-ವಿಮಾನ ನಿಲ್ದಾಣದ ಕಟ್ಟಡ ಪ್ರವೇಶಕ್ಕೆ ಮುನ್ನ ಪ್ರಯಾಣಿಕರು ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ವಲಯಕ್ಕೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಯಾಣಿಕರ ಲಗ್ಗೇಜುಗಳನ್ನು ಸ್ವಚ್ಛ ಮಾಡಿಕೊಳ್ಳಲು ವಿಮಾನ ನಿಲ್ದಾಣ ಕಾರ್ಯನಿರ್ವಾಹಕರು ಸೂಕ್ತ ವ್ಯವಸ್ಥೆ ಮಾಡಬೇಕು.

-ವಿಮಾನ ನಿಲ್ದಾಣಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕೆಗಳೊಂದಿಗೆ ಎಲ್ಲಾ ಆಹಾರ, ಪಾನೀಯ ಮತ್ತು ಚಿಲ್ಲರೆ ಅಂಗಡಿಗಳನ್ನು ತೆರೆಯಬೇಕು. ಪೊಟ್ಟಣದಲ್ಲಿ ಆಹಾರಗಳನ್ನು ಕಟ್ಟಿಸಿಕೊಂಡು ಹೋಗುವಾಗ ಅಂಗಡಿ ಮುಂದೆ ಜನದಟ್ಟಣೆ ಸೇರದಂತೆ ನೋಡಿಕೊಳ್ಳಬೇಕು. ಡಿಜಿಟಲ್ ಪಾವತಿ, ಸೆಲ್ಫ್ ಆರ್ಡರಿಂಗ್ ಬೂತ್ ಗಳಿಗೆ ಹೆಚ್ಚು ಉತ್ತೇಜನ ಕೊಡಬೇಕು.

-ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು.

-ವಿಮಾನ ಹೊರಡುವುದಕ್ಕೆ ನಾಲ್ಕು ಗಂಟೆ ಮೊದಲು ಮಾತ್ರ ಪ್ರಯಾಣಿಕರನ್ನು ನಿಲ್ದಾಣದೊಳಗೆ ಬಿಡಲಾಗುತ್ತದೆ.

-ಪ್ರಯಾಣಿಕರು ಮತ್ತು ವಿಮಾನ ನಿಲ್ದಾಣ ಸಿಬ್ಬಂದಿಗೆ ರಾಜ್ಯ ಸರ್ಕಾರಗಳು ಮತ್ತು ಆಡಳಿತಗಳು ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಟ್ಯಾಕ್ಸಿ ವ್ಯವಸ್ಥೆ ಮಾಡಬೇಕು.

-ವಿಮಾನ ನಿಲ್ದಾಣಕ್ಕೆ ಬಂದು ಹೋಗಲು ಖಾಸಗಿ ವಾಹನ ಅಥವಾ ಆಯ್ದ ಕ್ಯಾಬ್ ಸೇವೆಗಳನ್ನು ಮಾತ್ರ ಬಳಸಬೇಕು.

-ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು.

-ನಿಲ್ದಾಣದಲ್ಲಿ ಎಲ್ಲಾ ಸಿಬ್ಬಂದಿ ಕೈಯಲ್ಲಿ ಸ್ಯಾನಿಟೈಸರ್ ಮತ್ತು ಪಿಪಿಇ ಕಡ್ಡಾಯವಾಗಿ ಇರಬೇಕು.

-ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಆಗಮನ, ನಿರ್ಗಮನ ಸೇವೆಗಳಿಗೆ ಟ್ರಾಲೀಸ್ ಗಳನ್ನು ಬಳಸುವಂತಿಲ್ಲ.

-ಟರ್ಮಿನಲ್ ನ ಎಲ್ಲಾ ಪ್ರವೇಶ ಗೇಟ್ ಗಳನ್ನು ತೆರೆಯಲಾಗುತ್ತದೆ.

-ಪ್ರಯಾಣಿಕರ ಶೂಗಳನ್ನು ಸ್ವಚ್ಛ ಮಾಡಲು ಪ್ರವೇಶ ದ್ವಾರದಲ್ಲಿ ಮ್ಯಾಟ್ ಮತ್ತು ಕಾರ್ಪೆಟ್ ಗಳನ್ನು ಬ್ಲೀಚ್ ಗಳಿಂದ ಸ್ವಚ್ಛ ಮಾಡಿರಬೇಕು.

-ಪ್ರಯಾಣಿಕರೊಂದಿಗೆ ಮಾತುಕತೆ ನಡೆಸುವಾಗ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

-ಟರ್ಮಿನಲ್ ಗಳಲ್ಲಿ ಪತ್ರಿಕೆ, ಮ್ಯಾಗಜಿನ್ ಗಳನ್ನು ಪ್ರಯಾಣಿಕರಿಗೆ ಓದಲು ಇಡುವಂತಿಲ್ಲ.

-ಜ್ವರ, ಕೆಮ್ಮು, ಕಫ,ಉಸಿರಾಟದ ತೊಂದರೆ ಇರುವ ಸಿಬ್ಬಂದಿಯನ್ನು ಒಳಗೆ ಕೆಲಸಕ್ಕೆ ಸೇರಿಸಿಕೊಳ್ಳುವಂತಿಲ್ಲ.

-ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಪ್ರಯಾಣಿಕರನ್ನು ವಿಭಾಗ ಮಾಡಿ ತಪಾಸಣೆ ಮಾಡಿ ಹೊರ ಬಿಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com