ಸಾಲದ ಹೊರೆ ತಾಳದ ಒಂದೇ ಕುಟುಂಬದ ಐವರು ಆತ್ಮಹತ್ಯೆ!
ಗುವಾಹತಿ: ಆರ್ಥಿಕ ಹೊಡೆತ ತಾಳಲಾಗದೆ ಮೂವರು ಪುತ್ರಿಯರು ಸೇರಿದಂತೆ ಕುಟುಂಬದ ಎಲ್ಲಾ ಐವರು ಸದಸ್ಯರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಅಸೋಂನ ಕೊಕ್ರಜಾರ್ ಜಿಲ್ಲೆಯ ಗೊಸ್ಸೈಗಾಂವ್ ನ ತುಳಸಿಬಿಲ್ ಪ್ರದೇಶದಲ್ಲಿ ವರದಿಯಾಗಿದೆ.
ಇಂದು ಬೆಳಿಗ್ಗೆ ಗೊಸ್ಸೈಗಾಂವ್ ನಲ್ಲಿರುವ ತಮ್ಮ ಬಾಡಿಗೆ ಮನೆಯೊಳಗೆ ನಿರ್ಮಲ್ ಪಾಲ್, ಅವರ ಪತ್ನಿ ಮತ್ತು ಮೂವರು ಪುತ್ರಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಿರ್ಮಲ್ ಪಾಲ್ ಎಲ್ಪಿಜಿ ವಿತರಕ ಏಜೆನ್ಸಿಯನ್ನು ಹೊಂದಿದ್ದರು. ಅವರ ಕುಟುಂಬ ಇತ್ತೀಚೆಗೆ ಭಾರೀ ಹಣಕಾಸಿನ ಮುಗ್ಗಟ್ಟು ಎದುರಿಸಿತ್ತೆಂದು ಮೃತ ಕುಟುಂಬದ ನೆರೆ ಹೊರೆಯವರು ಹೇಳಿದ್ದಾರೆ. 16 ಮತ್ತು 17 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಬ್ಬರು ಇನ್ನೂ ಕಾಲೇಜು ವ್ಯಾಸಂಗ ಮಾಡುತ್ತಿದ್ದರೆ ಹಿರಿಯ ಪುತ್ರಿಗೆ 25 ವರ್ಷವಾಗಿತ್ತು. ಆಕೆ ಪದವಿ ಮುಗಿಸಿ ಸ್ಥಳೀಯ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು.
ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ, ಕುಟುಂಬವು ತಮ್ಮ ಪ್ರಾಣವನ್ನು ಕಳೆದುಕೊಂಡಿದೆ ಎಂದು ಶಂಕೆ ವ್ಯಕ್ತವಾಗಿದೆ. ಕೊಕ್ರಜಾರ್ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ, ಪ್ರಾಥಮಿಕ ತನಿಖೆ ನಡೆಸಿದ್ದು ಆರ್ಥಿಕ ಹೊರೆ ಈ ದುರ್ಘಟನೆಗೆ ಕಾರಣವಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ