ಜಮ್ಮು: ನನ್ನ ಜನರ ಸಾಂವಿಧಾನಿಕ ಹಕ್ಕುಗಳನ್ನು ಪುನಃ ಪಡೆಯುವವರೆಗೂ ನಾನು ಸಾಯುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಹೇಳಿದ್ದಾರೆ.
ಒಂದು ವರ್ಷದ ನಂತರ ಇದೇ ಮೊದಲ ಬಾರಿಗೆ ಜಮ್ಮುವಿನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ದೇಶದ ಹಾದಿ ತಪಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಜನರಿಗೆ ಸುಳ್ಳು ಭರವಸೆಯನ್ನು ನೀಡುತ್ತಿದೆ ಎಂದು ತಿಳಿಸಿದರು.
ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಘೋಷಣೆಯ ಸಭೆಗೂ ಮುನ್ನ ಮಾತನಾಡಿದ ಅವರು, ರಾಜ್ಯದ ಜನರಿಗೆ ಹಕ್ಕುಗಳನ್ನು ಮರಳಿ ಪಡೆಯುವವರೆಗೂ ನಾನು ಸಾಯುವುದಿಲ್ಲ. ಜನರಿಗೆ ಏನಾದರೂ ಮಾಡಲು ನಾನು ಇಲ್ಲಿದ್ದೇನೆ. ನನ್ನ ಕೆಲಸವನ್ನು ಮುಗಿಸುವ ದಿನ ಈ ಜಗತ್ತನ್ನು ತೊರೆಯುತ್ತೇನೆ ಎಂದು ಹೇಳಿದರು. ಸಂವಿಧಾನದ 370ನೇ ವಿಧಿ ರದ್ದತಿ ನಂತರ 84 ವರ್ಷದ ಅಬ್ದುಲ್ಲಾ ಇದೇ ಮೊದಲ ಬಾರಿಗೆ ಜಮ್ಮುವಿನಲ್ಲಿ ರಾಜಕೀಯ ಸಭೆ ನಡೆಸಿದರು.
ಕಳೆದ ವರ್ಷ ಆಗಸ್ಟ್ 5 ರಂದು ವಿಶೇಷ ಸ್ಥಾನಮಾನ ರದ್ದತಿ ನಂತರ ಅದನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಘೋಷಣೆ- ಪಿಎಜಿಡಿಯನ್ನು ಜಮ್ಮು- ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಫೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ರಚಿಸಿವೆ.
Advertisement