ನವದೆಹಲಿ: ಕೋವಿಡ್ ಸಾಂಕ್ರಾಮಿಕದ ನಡುವೆ ಇಂಧನ ವಲಯದಲ್ಲಿ ಬಹಳ ಸವಾಲುಗಳು, ಸಮಸ್ಯೆಗಳು ಇರುವ ಸಂದರ್ಭದಲ್ಲಿ ಇಂಧನ ವಲಯ ಕ್ಷೇತ್ರಕ್ಕೆ ಕಾಲಿಟ್ಟಿದ್ದೀರಿ, ಈ ಸಮಯದಲ್ಲಿ ಉದ್ಯಮಶೀಲರಾಗಿ ಬೆಳೆಯಲು ನಿಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಮೊನೊಕ್ರಿಸ್ಟಲೈನ್ ಸೋಲಾರ್ ಫೋಟೋ ವಲ್ಟೈಕ್ ಪ್ಯಾನಲ್ ನ 45 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ದೇಶದಲ್ಲಿ ಇಂಗಾಲದ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೇಶದ ಗುರಿಯಿದ್ದು ಅದರೆಡೆಗೆ ಹೆಜ್ಜೆಹಾಕಿ ಇಂಗಾಲದ ಉತ್ಪಾದನೆ ಶೇಕಡಾ 30ರಿಂದ 35ರಷ್ಟು ಕಡಿಮೆಯಾಗಬೇಕಿದೆ. ಈ ದಶಕದಲ್ಲಿ ಇಂಧನ ಅಗತ್ಯಗಳಿಗೆ ನೈಸರ್ಗಿಕ ಅನಿಲವನ್ನು 4 ಪಟ್ಟು ಹೆಚ್ಚು ಬಳಕೆ ಮಾಡುವ ಅಗತ್ಯವಿದೆ ಎಂದರು.
21ನೇ ಶತಮಾನದ ಯುವಜನತೆ ನಿಷ್ಕಳಂಕವಾಗಿ ಸ್ವಚ್ಛ ಮನಸ್ಸು, ಹೃದಯದಿಂದ ಸ್ಪಷ್ಟ ಗುರಿ ಮತ್ತು ಉದ್ದೇಶದೊಂದಿಗೆ ಮುಂದೆ ಸಾಗಬೇಕು. ಮನುಷ್ಯನಿಗೆ ಜವಾಬ್ದಾರಿ ಬಂದರೆ ಜೀವನದಲ್ಲಿ ಅವಕಾಶಗಳು ಸಿಗುತ್ತವೆ. ಹೊರೆಯ ಭಾವವನ್ನು ಇಟ್ಟುಕೊಂಡು ಬದುಕುವವರು ಯಾವತ್ತಿಗೂ ಉದ್ಧಾರವಾಗುವುದಿಲ್ಲ, ಜೀವನದಲ್ಲಿ ಸೋಲುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಪ್ರಧಾನಿ ಕಿವಿಮಾತು ಹೇಳಿದರು.
Advertisement