'ಗಾಂಧಿ ಕುಟುಂಬದ ನಿಷ್ಠಾವಂತ, ಕಾಂಗ್ರೆಸ್ ಪಕ್ಷದಲ್ಲಿ ಜ್ಞಾನ, ಅನುಭವದ ಭಂಡಾರವಾಗಿದ್ದ ನಾಯಕ' ಅಹ್ಮದ್ ಪಟೇಲ್

ಅಹ್ಮದ್ ಪಟೇಲ್, ಕಾಂಗ್ರೆಸ್ ನಲ್ಲಿ ಬಹುಮುಖ್ಯ ವ್ಯಕ್ತಿ. ನೆಹರೂ-ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ, ಬಹಳ ಪ್ರಭಾವಿ ವ್ಯಕ್ತಿ.
ಅಹ್ಮದ್ ಪಟೇಲ್
ಅಹ್ಮದ್ ಪಟೇಲ್
Updated on

ನವದೆಹಲಿ: ಅಹ್ಮದ್ ಪಟೇಲ್, ಕಾಂಗ್ರೆಸ್ ನಲ್ಲಿ ಬಹುಮುಖ್ಯ ವ್ಯಕ್ತಿ. ನೆಹರೂ-ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ, ಬಹಳ ಪ್ರಭಾವಿ ವ್ಯಕ್ತಿ, ಹಂತಹಂತವಾಗಿ ಪಕ್ಷದಲ್ಲಿ ತನ್ನ ಶಕ್ತಿ, ಪ್ರಭಾವವನ್ನು ಬೆಳೆಸಿಕೊಳ್ಳುತ್ತಾ ಹೋಗಿ ಹೈಕಮಾಂಡ್ ನ ನಿಷ್ಠಾವಂತ, ಆಪ್ತರಾಗಿದ್ದ ನಾಯಕ, ಯಾರು ಏನೇ ಸಲಹೆ, ಅಭಿಪ್ರಾಯ ಬೇಕಿದ್ದರೂ ಅಹ್ಮದ್ ಪಟೇಲ್ ಅವರನ್ನು ಸಂಪರ್ಕಿಸುತ್ತಿದ್ದರು.

ಇಂತಹ ಬಹಳ ದೊಡ್ಡ ರಾಜಕೀಯ ನಾಯಕ, ಕಾಂಗ್ರೆಸ್ ನ ಒಂದು ಕೊಂಡಿ ಇಂದು ನಸುಕಿನ ಜಾವ ಕಳಚಿಬಿದ್ದಿದೆ. ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕಳೆದೊಂದು ತಿಂಗಳ ಹಿಂದೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಇಂದು ಮುಂಜಾನೆ ಗುರುಗ್ರಾಮ್ ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 

2004ರಿಂದ 2014ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಅಹ್ಮದ್ ಪಟೇಲ್ ಪಕ್ಷ ಮತ್ತು ಸರ್ಕಾರದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹ್ಮದ್ ಪಟೇಲ್, ಪಕ್ಷದಲ್ಲಿ ಉಳಿದ ಹಿರಿಯ ನಾಯಕರಿಗಿಂತ ಹೈಕಮಾಂಡ್ ಗೆ ತುಸು ಆಪ್ತರಾಗಿದ್ದರು ಮತ್ತು ಹಲವು ವಿಚಾರಗಳಲ್ಲಿ ತಮ್ಮ ಪ್ರಭಾವವನ್ನು ಬಳಸಿಕೊಂಡಿದ್ದರು ಎಂದರೆ ತಪ್ಪಾಗಲಾರದು. 

ಅಹ್ಮದ್ ಪಟೇಲ್ ಕಾಂಗ್ರೆಸ್ ಪಕ್ಷದಲ್ಲಿ ಸಂಘಟಕನಾಗಿ ಕೆಲಸ ಮಾಡಿದ್ದೂ ಅಲ್ಲದೆ ಬೇರೆ ಪಕ್ಷಗಳಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ, ತೃಣಮೂಲ ಕಾಂಗ್ರೆಸ್ ನ ನಾಯಕರ ಜೊತೆ ಕೂಡ ಉತ್ತಮ ಸಂಪರ್ಕ ಬೆಸೆಯಲು ಕೆಲಸ ಮಾಡಿದ್ದರು. 

1977ರಲ್ಲಿ ಗುಜರಾತ್ ನಲ್ಲಿ ಜನತಾ ಪಕ್ಷದ ಅಲೆಯಿದ್ದಾಗ ಮೊದಲ ಬಾರಿಗೆ ಅಹ್ಮದ್ ಪಟೇಲ್ ಅವರು ಲೋಕಸಭೆಗೆ ಬರೂಚ್ ಕ್ಷೇತ್ರದಿಂದ ಆರಿಸಿ ಬಂದಿದ್ದರು. ಆಗ ಅವರನ್ನು ಗುಜರಾತ್ ನ ಯುವ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. 71 ವರ್ಷದ ಅಹ್ಮದ್ ಪಟೇಲ್ ಲೋಕಸಭೆಗೆ ಮೂರು ಬಾರಿ ಆಯ್ಕೆಯಾಗಿ ಬಂದಿದ್ದರು ಮತ್ತು ರಾಜ್ಯಸಭೆಗೆ 5 ನೇ ಬಾರಿ ಸದಸ್ಯರಾಗಿದ್ದರು.

16 ವರ್ಷಗಳ ಕಾಲ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಪಕ್ಷದ ಉನ್ನತ ಮಟ್ಟದ ನಾಯಕರು ಮತ್ತು ಹಲವು ಹಂತಗಳ ಪಕ್ಷದ ಕಾರ್ಯಕಾರಿಗಳ ಜೊತೆ ಕೆಲಸ ಮಾಡುವಾಗ ಅವರ ಕಾರ್ಯವೈಖರಿಯಿಂದಾಗಿ ಹೈಕಮಾಂಡ್ ಜೊತೆ ನಂಬಿಕೆ ಗಳಿಸಿಕೊಂಡಿದ್ದರು.ಪಕ್ಷದ ಖಜಾಂಚಿಯಾಗಿ 2018ರಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ನೇಮಕಗೊಂಡರು. ಆಗ ರಾಹುಲ್ ಗಾಂಧಿಯವರು ಪಕ್ಷದ ಅಧ್ಯಕ್ಷರಾಗಿದ್ದರು. 2004ರಲ್ಲಿ ಯುಪಿಎ ಅಧಿಕಾರಕ್ಕೆ ಬಂದಿದ್ದಾಗ ಅಹ್ಮದ್ ಪಟೇಲ್ ಸಂಪುಟಕ್ಕೆ ಸೇರದೆ ಪಕ್ಷದಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿದ್ದರು.

ಪಕ್ಷದಲ್ಲಿ ಮುಂದಿನ ತಲೆಮಾರಿನ ನಾಯಕರಿಗೆ ಮಾದರಿಯಾಗಿದ್ದರು. ಮಾಧ್ಯಮಗಳ ಜೊತೆ ಕೂಡ ಉತ್ತಮ ಸಂಬಂಧ ಹೊಂದಿದ್ದರು. ಗುಜರಾತ್ ನಿಂದ ರಾಜ್ಯಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸಿನೊಂದಿಗೆ ರಾಜ್ಯಸಭೆ ಪ್ರವೇಶಿಸಿದ್ದರು.

ಅಹ್ಮದ್ ಪಟೇಲ್ ಹುಟ್ಟಿದ್ದು 1949ರ ಆಗಸ್ಟ್ 21ರಂದು ಗುಜರಾತ್ ನಲ್ಲಿ. ಸೌತ್ ಗುಜರಾತ್ ವಿಶ್ವವಿದ್ಯಾಲಯದ ಶ್ರೀ ಜಯೇಂದ್ರ ಕಾಲೇಜಿನಲ್ಲಿ ಬಿ ಎಸ್ಸಿ ಪದವಿ ಗಳಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com