ಪಣಜಿ: ಮೂರು ದಿನಗಳ ಹಿಂದೆ ಗೋವಾ ಕರಾವಳಿಯ ಅರಬೀಯನ್ ಸಮುದ್ರದಲ್ಲಿ ಅಪಘಾತಕ್ಕೀಡಾಗಿರುವ ಮಿಗ್ -29 ಕೆ ವಿಮಾನದ ಕೆಲವು ಭಗ್ನಾವಶೇಷಗಳನ್ನು ಭಾರತೀಯ ನೌಕಪಡೆ ವಶಪಡಿಸಿಕೊಂಡಿರುವುದಾಗಿ ವಕ್ತಾರರೊಬ್ಬರು ಭಾನುವಾರ ತಿಳಿಸಿದ್ದು, ನಾಪತ್ತೆಯಾಗಿರುವ ಪೈಲಟ್ ನಿಶಾಂತ್ ಸಿಂಗ್ ಗಾಗಿ ಹಡಗುಗಳು ಹಾಗೂ ವಿಮಾನಗಳು ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿರುವುದಾಗಿ ಹೇಳಿದ್ದಾರೆ.
ಹೆಚ್ಚುವರಿಯಾಗಿ ನಾಲ್ಕು ಯುದ್ಧದ ಹಡಗುಗಳು ಮತ್ತು 14 ವಿಮಾನಗಳ ಮೂಲಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕರಾವಳಿ ಉದ್ದಕ್ಕೂ ಹುಡುಕಾಟಕ್ಕಾಗಿ ಭಾರತೀಯ ನೌಕಪಡೆಯ ಪಾಸ್ಟ್ ಇಂಟರ್ ಸೆಪ್ಟರ್ ಕ್ರಾಪ್ಟ್ ನ್ನು ಸಹ ನಿಯೋಜಿಸಲಾಗಿದೆ ಎಂದು ರಕ್ಷಣಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ಗುರುವಾರ ಅಪಘಾತಕ್ಕೀಡಾಗಿ, ನಂತರ ಕಾಣೆಯಾದ ಮಿಗ್ -29 ತರಬೇತಿ ವಿಮಾನದ ಎರಡನೇ ಪೈಲಟ್ ಪತ್ತೆಗೆ ಭಾರತೀಯ ನೌಕಪಡೆಯ ಸಿಬ್ಬಂದಿ ಹಡಗುಗಳು ಮತ್ತು ವಿಮಾನಗಳ ಸೇವೆಯೊಂದಿಗೆ ಪರಿಹಾರ ಕಾರ್ಯ ಚುರುಕುಗೊಳಿಸಿವೆ. ಲ್ಯಾಂಡಿಂಗ್ ಗೇರ್, ಟರ್ಬೋ ಚಾರ್ಜರ್, ಇಂಧನ ಟ್ಯಾಂಕ್ ಎಂಜಿನ್ ಮತ್ತು ವಿಂಗ್ ಎಂಜಿನ್ ಕೌಲಿಂಗ್ ಸೇರಿದಂತೆ ವಿಮಾನದ ಕೆಲವು ಭಗ್ನಾವಶೇಷಗಳು ಪತ್ತೆಯಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
Advertisement