ತಮಿಳು ಶಾಲೆಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿ ಮಾಡುವಂತೆ ಯಡಿಯೂರಪ್ಪಗೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮನವಿ
ಚೆನ್ನೈ: ಕರ್ನಾಟಕದಲ್ಲಿನ ತಮಿಳು ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಮತ್ತು ಮುಚ್ಚಿರುವ ಶಾಲೆಗಳನ್ನು ಪುನರಾರಂಭಿಸುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮನವಿ ಮಾಡಿದ್ದಾರೆ.
ಈ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಪಳನಿಸ್ವಾಮಿ ಅವರು, ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳಲ್ಲಿ ಖಾಲಿ ಇರುವ ತಮಿಳು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ತಮ್ಮ ಮಾತೃಭಾಷೆಯಲ್ಲೇ ಓದುವಂತಾಗಲು ಹಿಂದಿನ ವರ್ಷಗಳಲ್ಲಿ ಕರ್ನಾಟಕ ಸರ್ಕಾರ ವಿವಿಧ ಜಿಲ್ಲೆಗಳಲ್ಲಿ ಅನೇಕ ತಮಿಳು ಶಾಲೆಗಳನ್ನು ಆರಂಭಿಸಿದೆ. ಖಾಸಗಿ ತಮಿಳು ಶಾಲೆಗಳನ್ನು ತೆರೆಯಲು ಒಪ್ಪಿಗೆ ನೀಡಿದೆ ಮತ್ತು ಕರ್ನಾಟಕ ಸರ್ಕಾರ ಅನುದಾನವನ್ನೂ ನೀಡಿದೆ ಎಂದು ತಮಿಳುನಾಡು ಸಿಎಂ ಹೇಳಿದ್ದಾರೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಮಿಳು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಮತ್ತು ಹೊಸ ಖಾಸಗಿ ತಮಿಳು ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ ಎಂಬ ವಿಚಾರವನ್ನು ಕರ್ನಾಟಕ ತಮಿಳು ಶಾಲೆ ಮತ್ತು ಕಾಲೇಜು ಶಿಕ್ಷಕರ ಸಂಘ, ತಮಿಳುನಾಡು ಸರ್ಕಾರದ ಗಮನಕ್ಕೆ ತಂದಿದೆ. ಹೀಗಾಗಿ ತಮಿಳು ಶಿಕ್ಷಕರ ನೇಮಕಕ್ಕೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಪಳನಿಸ್ವಾಮಿ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ