ಸರ್ಕಾರಿ ಅನುದಾನಿತ ಸಂಸ್ಕೃತ ಶಾಲೆ, ಮದರಸಾಗಳಿಗೆ ಬೀಗ ಜಡಿಯಲು ಅಸ್ಸಾಂ ಸರ್ಕಾರದ ನಿರ್ಧಾರ
ನವದೆಹಲಿ: ಸರ್ಕಾರಿ ಅನುದಾನಿತ ಸಂಸ್ಕೃತ ಶಾಲೆಗಳು, ಮದರಸಾಗಳನ್ನು ಶಾಶ್ವತವಾಗಿ ಮುಚ್ಚಲು ಅಸ್ಸಾಂ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಅಸ್ಸಾಂನ ಶಿಕ್ಷಣ ಸಚಿವ ಹಾಗೂ ಹಣಕಾಸು ಸಚಿವ ಹಿಮಂತ ಬಿಸ್ವ ಶರ್ಮಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಧಾರ್ಮಿಕ ಪಠ್ಯಗಳನ್ನು ಕಲಿಸಲು ಸಾರ್ವಜನಿಕ ಹಣವನ್ನು ಬಳಕೆ ಮಾಡುವುದಕ್ಕೆ ಅಸ್ಸಾಂ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ ಈ ನೀತಿಯನ್ನು ಈ ಹಿಂದೆಯೇ ನಾವು ವಿಧಾನಸಭೆಯಲ್ಲಿ ಘೋಷಿಸಿದ್ದೆವು. ಸರ್ಕಾರದ ಅನುದಾನದಲ್ಲಿ ಯಾವುದೇ ಧಾರ್ಮಿಕ ಶಿಕ್ಷಣವನ್ನೂ ನೀಡಬಾರದು ಎಂಬುದು ನೀತಿಯಾಗಿದೆ ಎಂದು ಬಿಸ್ವ ಶರ್ಮಾ ತಿಳಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ಈ ಕುರಿತ ಅಧಿಸೂಚನೆ ಹೊರಡಿಸಲಾಗುತ್ತದೆ. ಮದರಸಾಗಳನ್ನು ಮುಚ್ಚಿದ ಬಳಿಕ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 48 ಶಿಕ್ಷಕರನ್ನು ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡುವುದಾಗಿ ಬಿಸ್ವ ಶರ್ಮಾ ತಿಳಿಸಿದ್ದಾರೆ.
ಅಸ್ಸಾಂ ಸರ್ಕಾರದ ನಿರ್ಧಾರಕ್ಕೆ ಅಖಿಲ ಭಾರತೀಯ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿರೋಧಿಸಿದ್ದು 2021 ರ ವಿಧಾನಸಭಾ ಚುನಾವಣೆ ವೇಳೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಆದೇಶವನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ