ಮುಂಗರ್ ಫೈರಿಂಗ್ ಹಿಂದುತ್ವದ ಮೇಲಿನ ದಾಳಿ: ಶಿವಸೇನೆ
ಮುಂಬೈ: ಮುಂಗರ್ ಫೈರಿಂಗ್ ಹಿಂದುತ್ವದ ಮೇಲಿನ ದಾಳಿಯಾಗಿದ್ದು, ಬಿಜೆಪಿ ನಾಯಕರು ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಶಿವ ಸೇನೆಯ ನಾಯಕ ಸಂಜಯ್ ರೌತ್ ಪ್ರಶ್ನಿಸಿದ್ದಾರೆ.
"ದುರ್ಗಾ ದೇವಿಯ ವಿಸರ್ಜನೆ ಸಂದರ್ಭದಲ್ಲಿ ಬಿಹಾರದ ಮುಂಗರ್ ನಲ್ಲಿ ಘರ್ಷಣೆ ನಡೆದು, ಪರಿಸ್ಥಿತಿ ತಹಬದಿಗೆ ತರಲು ಪೊಲೀಸರು ಫೈರಿಂಗ್ ನಡೆಸಿದ್ದರು. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರೆ ಹಲವರು ಗಾಯಗೊಂಡಿದ್ದರು. ಈ ಘಟನೆ ಹಿಂದುತ್ವದ ಮೇಲೆ ನಡೆದ ದಾಳಿಯಾಗಿದೆ." ಎಂದು ಸಂಜಯ್ ರೌತ್ ಆರೋಪಿಸಿದ್ದಾರೆ.
ಇದೇ ಘಟನೆ ಏನಾದರೂ ಮಹಾರಾಷ್ಟ್ರ ಅಥವಾ ಪಶ್ಚಿಮ ಬಂಗಾಳಗಳಲ್ಲಿ ನಡೆದಿದ್ದರೆ ಬಿಜೆಪಿ ಹಾಗೂ ಅವರ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹಿಸುತ್ತಿದ್ದರು. ಆದರೆ ಈಗ ಬಿಹಾರದಲ್ಲಿ ನಡೆದಿದ್ದು ರಾಜ್ಯಪಾಲರು ಹಾಗೂ ಬಿಜೆಪಿ ನಾಯಕರು ಏಕೆ ಸುಮ್ಮನಿದ್ದಾರೆ ಎಂದು ರೌತ್ ಪ್ರಶ್ನಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮುಂಗರ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಸ್ ಪಿಯನ್ನು ತೆಗೆದುಹಾಕಲು ಆದೇಶ ನೀಡಿದೆ. ಮಗಧದ ವಿಭಾಗೀಯ ಆಯುಕ್ತರಿಂದ ತನಿಖೆ ನಡೆಸಲು ಆದೇಶಿಸಲಾಗಿದ್ದು, 7 ದಿನಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

