ನೌಕಾಪಡೆ ನಿವೃತ್ತ ಅಧಿಕಾರಿ ಮೇಲೆ ಹಲ್ಲೆ :ಶಿವಸೇನಾ ನಾಯಕ ಕಮಲೇಶ್ ಕದಮ್ ಸೇರಿ 6 ಮಂದಿಗೆ ಜಾಮೀನು
ಮುಂಬೈ: ನೌಕಾ ಪಡೆ ನಿವೃತ್ತ ಅಧಿಕಾರಿ ಮೇಲೆ ಮುಂಬೈಯಲ್ಲಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಶಿವಸೇನಾ ನಾಯಕ ಕಮಲೇಶ್ ಕದಮ್ ಮತ್ತು ಇತರ ಐವರಿಗೆ ಜಾಮೀನು ಸಿಕ್ಕಿದೆ. ಮುಂಬೈಯ ಸಮ್ತಾ ಬಗರ್ ಪೊಲೀಸ್ ಠಾಣೆಯಲ್ಲಿ ಆರು ಮಂದಿಗೂ ಜಾಮೀನು ಸಿಕ್ಕಿದೆ.
ಘಟನೆಗೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಈ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅದಾಗಿ ದಿನ ಕಳೆಯುವುದರಲ್ಲಿಯೇ ಜಾಮೀನು ನೀಡಲಾಗಿದೆ.
ಘಟನೆ ಬಗ್ಗೆ ನಿನ್ನೆ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ನೌಕಾಪಡೆಯ ಮಾಜಿ ಅಧಿಕಾರಿ ಮದನ್ ಶರ್ಮ, ವಾಟ್ಸ್ ಆಪ್ ನಲ್ಲಿ ಮೆಸೇಜ್ ಫಾರ್ವರ್ಡ್ ಮಾಡಿದ್ದಕ್ಕೆ ತಮ್ಮ ಮೇಲೆ ದಾಳಿ ಮಾಡಲಾಗಿತ್ತು. ಇಂದು 8ರಿಂದ 10 ಮಂದಿ ಗುಂಪಾಗಿ ಬಂದು ನನ್ನ ಮೇಲೆ ಹಲ್ಲೆ ಮಾಡಿದರು, ಇದಕ್ಕೂ ಮೊದಲು ಬೆದರಿಕೆ ಕರೆಗಳು ಬರುತ್ತಿದ್ದವು. ನಾನು ನನ್ನ ಇಡೀ ಜೀವನದ ವೃತ್ತಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ್ದೇನೆ. ಇಂತಹ ಸರ್ಕಾರ ಇರಬಾರದು ಎಂದಿದ್ದರು.
ತಮ್ಮ ತಂದೆಯ ಮೇಲೆ ಶಿವಸೇನಾ ನಾಯಕರು ಹಲ್ಲೆ ಮಾಡಿದ್ದಾರೆ ಎಂದು ಮಾಜಿ ನೌಕಾಧಿಕಾರಿ ಪುತ್ರಿ ಡಾ ಶೀಲಾ ಶರ್ಮ ಕೂಡ ಆರೋಪಿಸಿದ್ದರು. ನನ್ನ ತಂದೆ ಮೆಸೇಜ್ ಫಾರ್ವರ್ಡ್ ಮಾಡಿದ್ದಕ್ಕೆ ಬೆದರಿಕೆ ಕರೆಗಳು ಬಂದವು. ಶಿವಸೇನೆಯ ಹಲವರು ಬಂದು ದಾಳಿ ಮಾಡಿದರು. ನಂತರ ಪೊಲೀಸರು ಬಂದು ನಮ್ಮ ತಂದೆಯನ್ನು ಕರೆದುಕೊಂಡು ಹೋದರು. ನಾವು ಎಫ್ಐಆರ್ ದಾಖಲಿಸಿದ್ದೇವೆ ಎಂದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್, ಆಘಾತ ವ್ಯಕ್ತಪಡಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಒತ್ತಾಯಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ