ಬಂಧಿತ ಉದ್ಯಮಿ ದೀಪಕ್ ಕೊಚ್ಚರ್ ಗೆ ಕೊರೋನಾ ಪಾಸಿಟಿವ್, ಏಮ್ಸ್ ಗೆ ದಾಖಲು
ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಅವರ ಪತಿ ಉದ್ಯಮಿ ದೀಪಕ್ ಕೊಚ್ಚರ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಡಿಯೋಕಾನ್ ಗ್ರೂಪ್ ಜೊತೆಗಿನ ವ್ಯವಹಾರದ ಬಗ್ಗೆ ತನಿಖೆ ನಡೆಸಿದ ನಂತರ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ದೀಪಕ್ ಕೊಚ್ಚರ್ ಅವರನ್ನು ಬಂಧಿಸಿದೆ.
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿದ್ದು, ಚಂದಾ ಕೊಚ್ಚರ್ ನೇತೃತ್ವದ ಐಸಿಐಸಿಐ ಬ್ಯಾಂಕ್, ವಿಡಿಯೋಕಾನ್ ಇಂಡಸ್ಟ್ರೀಸ್ ಗೆ ಸಾಲ ನೀತಿ ನಿಯಮ ಉಲ್ಲಂಘಿಸಿ ಹೆಚ್ಚು ಸಾಲ ಮಂಜೂರು ಮಾಡಲಾಗಿದೆ ಎಂದೂ ಆರೋಪಿಸಲಾಗಿದೆ.
2009 ರಿಂದ 2011ರ ಅವಧಿಯಲ್ಲಿ ಚಂದಾ ಕೊಚ್ಚಾರ್ ಅಧಿಕಾರದಲ್ಲಿದ್ದಾಗ ಐಸಿಐಸಿಐ ಬ್ಯಾಂಕ್ ಮೂಲಕ ಅವ್ಯವಹಾರ ನಡೆದಿದೆ ಎಂದು ಕಳೆದ ವರ್ಷ ಮಾರ್ಚ್ ನಲ್ಲಿ ಮೊದಲ ಬಾರಿಗೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಚಂದಾ ಕೊಚ್ಚರ್ ಕಳೆದ ಅಕ್ಟೋಬರ್‌ನಲ್ಲಿ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ