ಕಾಶ್ಮೀರ ಆಡಳಿತದಿಂದ ಮುಸ್ಲಿಮರನ್ನು ಸಂಪೂರ್ಣವಾಗಿ ತೆಗೆದುಹಾಕಿ ಹಿಂದೂಗಳನ್ನು ನೇಮಿಸಲಾಗಿದೆ: ಫಾರೂಕ್ ಅಬ್ದುಲ್ಲಾ

ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370 ಮತ್ತು 35ಎಯನ್ನು ತೆಗೆದುಹಾಕಿದ ನಂತರ ಕಾಶ್ಮೀರ ಆಡಳಿತದಿಂದ ಮುಸಲ್ಮಾನರನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. 
ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ
Updated on

ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370 ಮತ್ತು 35ಎಯನ್ನು ತೆಗೆದುಹಾಕಿದ ನಂತರ ಕಾಶ್ಮೀರ ಆಡಳಿತದಿಂದ ಮುಸಲ್ಮಾನರನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಅದರ ಬದಲು ಪ್ರಮುಖ ಹುದ್ದೆಗಳು ಹಿಂದೂಗಳ ಪಾಲಾಗಿವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಆರೋಪಿಸಿದ್ದಾರೆ.

ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಮತ್ತು ಹಿರಿಯ ಪತ್ರಕರ್ತೆ ಕಾವೇರಿ ಬಮ್ಜೈ ನಡೆಸಿದ್ದ ಲೈವ್ ವೆಬ್ ಚಾಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರಕ್ಕೆ ಸಂಬಂಧಪಟ್ಟ ಹತ್ತು ಹಲವು ಸಂಗತಿಗಳನ್ನು ಮಾತನಾಡಿದ್ದಾರೆ.

ಏಳು ತಿಂಗಳು ಗೃಹ ಬಂಧನದಲ್ಲಿದ್ದಿರಿ. ಹಿಂದೆ ರಾಜ್ಯವಾಗಿದ್ದ ಜಮ್ಮು-ಕಾಶ್ಮೀರ ಇಂದು ಕೇಂದ್ರಾಡಳಿತ ಪ್ರದೇಶವಾಗಿದ್ದ ಬಗ್ಗೆ ಏನನ್ನುತ್ತೀರಿ?
-ನನಗೆ ಈ ಸಮಯದಲ್ಲಿ ಖುರಾನ್ ಪವಿತ್ರ ಗ್ರಂಥ ಶಕ್ತಿಯನ್ನು ನೀಡಿತು. ಸಾಮಾನ್ಯವಾಗಿ ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳನ್ನಾಗಿ ಮಾಡಲಾಗುತ್ತದೆ. ಆದರೆ ಇಲ್ಲಿ ಭಾರತದ ಕಿರೀಟವೆನಿಸಿಕೊಂಡಿರುವ ಜಮ್ಮು-ಕಾಶ್ಮೀರ ವಿಚಾರದಲ್ಲಿ ತದ್ವಿರುದ್ಧವಾಗಿದೆ. ಇದು ನಮಗೆಲ್ಲರಿಗೂ ನೋವನ್ನುಂಟುಮಾಡಿದೆ. ಜಮ್ಮು-ಕಾಶ್ಮೀರ ಮುಸಲ್ಮಾನರು ಬಹುಸಂಖ್ಯಾತರಾಗಿರುವ ಪ್ರದೇಶ. ಭಾರತ ಬಹುಸಂಖ್ಯಾತ ಹಿಂದೂ ರಾಷ್ಟ್ರ ಎಂದು ಸಂಪೂರ್ಣ ತಿಳುವಳಿಕೆ ಇದ್ದುಕೊಂಡೇ ನಾವು ಭಾರತದ ಜೊತೆಗೆ ಸೇರಿದ್ದೆವು. ಅಂದಿನ ಉನ್ನತ ನಾಯಕ ಸರ್ದಾರ್ ವಲ್ಲಭಬಾಯಿ ಪಟೇಲ್ , ಜವಹರಲಾಲ್ ನೆಹರೂ ಅವರು ಅಮೆರಿಕದಲ್ಲಿದ್ದಾಗ ಸಂವಿಧಾನ ವಿಧಿ 370ನ್ನು ತಂದಿದ್ದರು. ಬಹುಸಂಖ್ಯಾತ ಮುಸಲ್ಮಾನರ ಗೌರವ, ಘನತೆಯನ್ನು ಎತ್ತಿ ಹಿಡಿಯುತ್ತೇವೆ, ಕಾಪಾಡುತ್ತೇವೆ ಎಂಬ ಭರವಸೆಯೊಂದಿಗೆ ಸಂವಿಧಾನ ವಿಧಿ 370ನ್ನು ತಂದರು. ಈಗ ಎಲ್ಲಿಗೆ ಹೋಯಿತು?

ಇನ್ನು ಇದನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ನಿಮಗೆ ಅನಿಸುತ್ತಿದೆಯೇ, ಅಥವಾ ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತದೆ ಎಂದು ನಿಮಗೆ ಅನಿಸುತ್ತದೇ?
-ಕೇಂದ್ರದ ನಾಯಕರು ನನಗೆ ಸಂಸತ್ತಿನಲ್ಲಿ ಮಾತನಾಡಲು ಕೂಡ ಬಿಡುವುದಿಲ್ಲ. ಅವರ ಉದ್ದೇಶ ಏನೆಂದು ನೀವು ಭಾವಿಸಿಕೊಳ್ಳಿ. ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶ ಮಾಡಿದ್ದರಿಂದ ಏನು ಪಡೆದುಕೊಂಡಿದ್ದೇವೆ, ಏನು ಕಳೆದುಕೊಂಡಿದ್ದೇವೆ ಎಂದು ಸದನದಲ್ಲಿ ಚರ್ಚೆ ಮಾಡೋಣ ಎಂದು ನಾವು ಕೇಳಿದೆವು. ಕಾಂಗ್ರೆಸ್ ನವರು ನಮ್ಮ ಜೊತೆ ಮಾತುಕತೆಗೆ ಜೊತೆಯಾಗುತ್ತೇವೆ ಎಂದರು. ಆದರೆ ಚರ್ಚೆ ನಡೆಯಲಿಲ್ಲ.

ಕಾಶ್ಮೀರದ ಭೌಗೋಳಿಕ ಸ್ಥಿತಿ ಬದಲಾಗಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಿಂದೆಯಾದರೆ ಇಲ್ಲಿ ಕಾಶ್ಮೀರಿ ಪಂಡಿತರಿದ್ದರು. ಆದರೆ ಇಂದು ಕಾಶ್ಮೀರಿ ಮುಸ್ಲಿಮರು ಮಾತ್ರ ಇದ್ದಾರೆ. ಕಾಶ್ಮೀರಿ ಪಂಡಿತರು ಇಲ್ಲಿನ ಭಾಗವಲ್ಲ ಎಂದು ನಾವು ಯಾವತ್ತೂ ಹೇಳಲಿಲ್ಲ. ಅವರು ತೊರೆದು ಹೋಗಲು ಬೇರೆ ಇತರ ಶಕ್ತಿಗಳು ಕಾರಣವೇ ಹೊರತು ನಾವಲ್ಲ.

ಕಾಶ್ಮೀರದ ಭೌಗೋಳಿಕ ಸ್ಥಿತಿಯನ್ನು ಬದಲಿಸಲು ಈ ಬದಲಾವಣೆ ಮಾಡಿದ್ದಾರೆಯೇ?
ನಾವು ಪ್ರತಿದಿನ ಅದನ್ನು ನೋಡುತ್ತೇವೆ.

ಇದಕ್ಕೆ ಏನು ಸಾಕ್ಷಿ?
ನನ್ನ ತಂದೆ, ನಾನು, ನನ್ನ ಮಗ, ಮುಫ್ತಿಯವರು ಅಥವಾ ಬೇರೆ ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಸರ್ಕಾರದ ಆಡಳಿತದಲ್ಲಿ ಹಿಂದು-ಮುಸ್ಲಿಮರಿಗೆ ಸಮಾನ ಅವಕಾಶವಿತ್ತು. ಇಂದು ಲೆಫ್ಟಿನೆಂಟ್ ಗವರ್ನರ್ ಇದ್ದಾರೆ, ಅವರು ಹಿಂದು, ಡಿಜಿ ಮತ್ತು ಇಬ್ಬರು ಐಜಿಗಳಿದ್ದಾರೆ, ಅವರು ಹಿಂದೂಗಳು. ನಾವಿದ್ದಾಗ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರತಿನಿಧಿಗಳಿದ್ದರು, ಆದರೆ ಇಂದು ಆ ಸಮಾನತೆ ಇಲ್ಲ, ಸಂಪೂರ್ಣವಾಗಿ ನಾಶವಾಗಿದೆ.

ಅಂದರೆ ಇಲ್ಲಿ ಒಂದು ಸಮುದಾಯದವರಿಗೆ ಮಾತ್ರ ಬುದ್ಧಿವಂತಿಕೆ, ಯೋಚಿಸುವ ಶಕ್ತಿಯಿದೆ, ಇನ್ನೊಂದು ಸಮುದಾಯಕ್ಕೆ ಇಲ್ಲವೆಂದು ನಿಮ್ಮ ಮಾತಿನ ಅರ್ಥವೇ?
ಇಲ್ಲಿನ ಇಂಟರ್ನೆಟ್ ಸಂಪರ್ಕದ ಬಗ್ಗೆ ಹೇಳಿ,ದೇಶದ ಎಲ್ಲಾ ಕಡೆ 4ಜಿ ಸಂಪರ್ಕವಿದ್ದು, ಸದ್ಯದಲ್ಲಿಯೇ 5ಜಿ ಸಂಪರ್ಕ ಕೂಡ ಇರುತ್ತದೆ. ಹಾಗಾದರೆ ಇಲ್ಲಿನ ಮಕ್ಕಳಿಗೆ, ಉದ್ಯಮಿಗೆ ಅದರ ಸೌಕರ್ಯವಿಲ್ಲವೇಕೆ?370 ವಿಧಿ ರದ್ದುಪಡಿಸಿದ ನಂತರ ಕಣಿವೆ ಪ್ರದೇಶದ ಚಿತ್ರಣ ಸಂಪೂರ್ಣ ಬದಲಾಗುತ್ತದೆ ಎಂದು ದೊಡ್ಡ ದೊಡ್ಡ ಭರವಸೆ ಕೊಟ್ಟಿದ್ದರಲ್ಲ, ಅದೆಲ್ಲ ಎಲ್ಲಿಗೆ ಹೋಯಿತು, ಜಮ್ಮು-ಕಾಶ್ಮೀರವನ್ನು ಮೂರು ಕುಟುಂಬಗಳು ಲೂಟಿ ಮಾಡಿವೆ ಎನ್ನುತ್ತಾರೆ, ಹಾಗಾದರೆ ಇಲ್ಲಿ ಆಸ್ಪತ್ರೆಗಳು, ಶಾಲಾ-ಕಾಲೇಜು ಶಿಕ್ಷಣ ಸಂಸ್ಥೆಗಳು ಹೇಗೆ ಸ್ಥಾಪನೆಯಾದವು, ಇಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳದಿರಲು ಹೇಗೆ ಸಾಧ್ಯವಾಯಿತು?

ಭರವಸೆಯ ಆಶಾಕಿರಣವಾಗಿ ನಿಮ್ಮನ್ನು ನೋಡುವ ಕಣಿವೆ ರಾಜ್ಯದ ಜನತೆಗೆ ನಿಮ್ಮ ಸಲಹೆಯೇನು?
-ನಾನು ಹೇಗೆ ಅವರಿಗೆ ಸಲಹೆ ನೀಡಲು ಸಾಧ್ಯ? ದೆಹಲಿಯ ಕೈಗೊಂಬೆ ಎಂದು ಜನ ನನ್ನನ್ನು ಕರೆಯುತ್ತಾರೆ. ನಾನು ಭಜನೆ ಮಾಡುತ್ತಾ ಭಾರತ್ ಮಾತಾ ಕಿ ಜೈ ಎಂದು ಹೇಳುತ್ತಿರುತ್ತೇನೆ ಎನ್ನುತ್ತಾರೆ. ಕೇಂದ್ರ ಸರ್ಕಾರದವರು ನನಗೆ ಯವುದಕ್ಕೂ ಅವಕಾಶ ನೀಡುತ್ತಿಲ್ಲ. ಕೆಲವರು ನನ್ನನ್ನು ಪಾಕಿಸ್ತಾನಿ ಎಂದು ಜರಿಯುತ್ತಾರೆ, ಇನ್ನು ಕೆಲವರು ಕಾಫಿರ್ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com