ಕೊವಿಡ್-19: ತಮಿಳುನಾಡಿನಲ್ಲಿ ಮತ್ತೆ 102 ಹೊಸ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 411ಕ್ಕೆ ಏರಿಕೆ

ದೆಹಲಿಯ ನಿಜಾಮುದ್ದೀನ್ ನಂಜು ದೇಶಾದ್ಯಂತ ವಿಶೇಷವಾಗಿ ತಮಿಳುನಾಡಿನಲ್ಲಿ ತೀವ್ರ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಮತ್ತೆ 102 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ: ದೆಹಲಿಯ ನಿಜಾಮುದ್ದೀನ್ ನಂಜು ದೇಶಾದ್ಯಂತ ವಿಶೇಷವಾಗಿ ತಮಿಳುನಾಡಿನಲ್ಲಿ ತೀವ್ರ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಮತ್ತೆ 102 ಮಂದಿಗೆ ಕೊರೋನಾ ವೈರಸ್ ಪಾಸಿಟಿವ್ ದೃಢಪಟ್ಟಿದೆ. ಈ ಪೈಕಿ ಬಹುತೇಕರು ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.

ನಿನ್ನೆಯಷ್ಟೇ ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ 74 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಮತ್ತೆ 102 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 411ಕ್ಕೆ ಏರಿಕೆಯಾಗಿದೆ.

ಜಮಾತ್ ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಸ್ವಯಂ ಪ್ರೇರಿತವಾಗಿ ತಪಾಸಣೆಗೆ ಒಳಗಾಗಿ ಎಂದು ತಮಿಳುನಾಡು ಸರ್ಕಾರ ಕರೆ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ 15 ಜಿಲ್ಲೆಗಳ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ತಮಿಳುನಾಡಿನಿಂದ ಸುಮಾರು 1500 ಮಂದಿ ದೆಹಲಿಯ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದ್ದು, ತಮಿಳುನಾಡು ಸರ್ಕಾರ ಈ ಎಲ್ಲರನ್ನು ಗುರುತಿಸಿ, ಪರೀಕ್ಷೆಗೆ ಒಳಪಡಿಸಬೇಕಾಗಿದೆ.

ಜಮಾತ್ ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 2,000ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಮಾ. 13ರಿಂದ 15ರವರೆಗೆ ಈ ಸಭೆ ನಡೆದಿತ್ತು. ಇದೀಗ ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ 110 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮಹಾಮಾರಿ ಕೊರೋನಾ ವೈರಸ್ ದೇಶಾದ್ಯಂತ ಇದುವರೆಗೆ 76 ಮಂದಿಯನ್ನು ಬಲಿ ಪಡೆದಿದ್ದು, 2,500ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com