ಹಿರಿಯ ನಾಯಕರಿಂದ ಸೋನಿಯಾ ಗಾಂಧಿಗೆ ಪತ್ರ: ಕಾರ್ಯಕಾರಿ ಸಮಿತಿ ಸಭೆಗೆ ಮುನ್ನ ಎದ್ದಿದಿಯೇ ಕಾಂಗ್ರೆಸ್ ನಲ್ಲಿ ಭಿನ್ನಮತ?

ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುವುದಕ್ಕೆ ಮೊದಲು ಪಕ್ಷದಲ್ಲಿ ನಾಯಕತ್ವ ವಿಚಾರವಾಗಿ ಆಂತರಿಕ ಭಿನ್ನಮತ ಎದ್ದಿದೆ ಎಂಬ ಮಾತುಗಳು ಕೇಳಿಬರುತ್ತಿದೆ.ಸಂಸದರು ಮತ್ತು ಮಾಜಿ ಸಚಿವರುಗಳ ಒಂದು ಬಣ ಸಾಮೂಹಿಕ ನಾಯಕತ್ವಕ್ಕೆ ಒತ್ತಾಯಿಸುತ್ತಿದ್ದರೆ ಮತ್ತೊಂದು ಗುಂಪು ರಾಹುಲ್ ಗಾಂಧಿಯವರು ಮತ್ತೆ ಪಕ್ಷದ ಅಧ್ಯಕ್ಷರಾಗಬೇಕೆಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದ
ಸೋನಿಯಾನಿಯಾ ಗಾಂಧಿ, ರಾಹುಲ್ ಗಾಂಧಿ
ಸೋನಿಯಾನಿಯಾ ಗಾಂಧಿ, ರಾಹುಲ್ ಗಾಂಧಿ

ನವದೆಹಲಿ: ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುವುದಕ್ಕೆ ಮೊದಲು ಪಕ್ಷದಲ್ಲಿ ನಾಯಕತ್ವ ವಿಚಾರವಾಗಿ ಆಂತರಿಕ ಭಿನ್ನಮತ ಎದ್ದಿದೆ ಎಂಬ ಮಾತುಗಳು ಕೇಳಿಬರುತ್ತಿದೆ.ಸಂಸದರು ಮತ್ತು ಮಾಜಿ ಸಚಿವರುಗಳ ಒಂದು ಬಣ ಸಾಮೂಹಿಕ ನಾಯಕತ್ವಕ್ಕೆ ಒತ್ತಾಯಿಸುತ್ತಿದ್ದರೆ ಮತ್ತೊಂದು ಗುಂಪು ರಾಹುಲ್ ಗಾಂಧಿಯವರು ಮತ್ತೆ ಪಕ್ಷದ ಅಧ್ಯಕ್ಷರಾಗಬೇಕೆಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಪಕ್ಷವನ್ನು ಪುನಶ್ಚೇತನಗೊಳಿಸಬೇಕೆಂದು ಹಲವು ಹಿರಿಯ ನಾಯಕರು ಸೋನಿಯಾ ಗಾಂದಿಯವರಿಗೆ ಐದು ಅಂಶಗಳ ಅಜೆಂಡಾವನ್ನು ಮುಂದಿಟ್ಟುಕೊಂಡು ಪತ್ರ ಬರೆದಿದ್ದಾರೆ ಎಂಬುದು ಸುದ್ದಿಯಾಗಿದೆ. ಪಕ್ಷದಲ್ಲಿ ಸಕ್ರಿಯ ನಾಯಕತ್ವದ ಅಗತ್ಯವಿದ್ದು ಪಕ್ಷದ ಸ್ಥಿತಿಗತಿ ಮತ್ತು ಅದು ರಾಜ್ಯಗಳಲ್ಲಿ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಪ್ರಶ್ನೆಗಳನ್ನು ಹುಟ್ಟುಹಾಕಿ ನಾಯಕರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದು ಅಲ್ಲದೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಕೆಲ ಸದಸ್ಯರು, ಸಂಸದರು ಮತ್ತು ನಾಯಕರು ಸೋನಿಯಾ ಗಾಂಧಿಗೆ ಪತ್ರ ಬರೆದು ಅದರಲ್ಲಿ ಹಲವು ಪ್ರಶ್ನೆಗಳನ್ನೆತ್ತಿ, ಪಕ್ಷದ ಕಾರ್ಯವೈಖರಿ ಬಗ್ಗೆ ಕೂಡ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಐದು ಪುಟಗಳ ಪತ್ರವನ್ನು ಪಕ್ಷದ ಹಿರಿಯ ಇಬ್ಬರು ನಾಯಕರು ಬರೆದು ಅದಕ್ಕೆ ಸುಮಾರು 20 ಮಂದಿ ಸಹಿ ಹಾಕಿ ಸೋನಿಯಾ ಗಾಂಧಿಗೆ ಕಳುಹಿಸಿದ್ದು ಅದು ಹೈಕಮಾಂಡ್ ಗೆ ಅಸಮಾಧಾನ ತಂದಿದೆ ಎಂಬ ಮಾಹಿತಿ ಸಿಕ್ಕಿದೆ. ಪಕ್ಷದ ಹೈಕಮಾಂಡ್ ವಿರುದ್ಧ ಆರೋಪ ಪಟ್ಟಿಯ ರೀತಿಯಲ್ಲಿ ಪತ್ರವಿದ್ದು, ಅದರಲ್ಲೂ ರಾಹುಲ್ ಗಾಂಧಿ ಕಾರ್ಯವೈಖರಿ ಮೇಲೆ ಅಪನಂಬಿಕೆ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್, ಆನಂದ್ ಶರ್ಮ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್, ಜಿತಿನ್ ಪ್ರಸಾದ್, ವೀರಪ್ಪ ಮೊಯ್ಲಿ, ಸಂದೀಪ್ ದೀಕ್ಷಿತ್, ಪ್ರಮೋದ್ ತಿವಾರಿ, ಪಿ ಜೆ ಕುರಿಯನ್ ಪತ್ರಕ್ಕೆ ಸಹಿ ಹಾಕಿದವರಲ್ಲಿ ಪ್ರಮುಖರಾಗಿದ್ದಾರೆ.

ಆದರೆ ತಾವು ಪತ್ರ ಬರೆದು ಅದಕ್ಕೆ ಸಹಿ ಹಾಕಿ ಕಳುಹಿಸಿದ್ದೇವೆ ಎಂದು ಈ ನಾಯಕರಾಗಲಿ, ನಾಯಕರಿಂದ ಪತ್ರ ಬಂದಿದೆ ಎಂದು ಕಾಂಗ್ರೆಸ್ ಆಗಲಿ ಹೇಳುತ್ತಿಲ್ಲ. ಹೆಸರು ಹೇಳಲಿಚ್ಛಿಸದ ನಾಯಕರೊಬ್ಬರು, ಗಾಂಧಿ ನಾಯಕತ್ವ ವಿರುದ್ಧ ಬರೆದ ಪತ್ರವಲ್ಲ ಇದು. ಪಕ್ಷದಲ್ಲಿ ಏನಾಗಬೇಕು ಮತ್ತು ನಾಯಕತ್ವದಲ್ಲಿ ಯಾವ ತೀರ್ಮಾನವಾಗಬೇಕೆಂದು ಪತ್ರದಲ್ಲಿ ಹೇಳಿದ್ದಾರೆ. ರಾಹುಲ್ ಗಾಂಧಿಯವರು ಮತ್ತೆ ಕಾಂಗ್ರೆಸ್ ಅಧ್ಯಕ್ಷರಾದರೆ ನಾನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಏನು ಚರ್ಚೆಗೆ ಬರುತ್ತದೆ, ವಿವಾದಗಳು ನಡೆಯುತ್ತವೆಯೇ ಎಂದು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com