ದೆಹಲಿ ಹಿಂಸಾಚಾರ: ಪ್ರಚೋದನಕಾರಿ ಹೇಳಿಕೆ ನೀಡಿದವರ ವಿರುದ್ಧ ಎಫ್ಐಆರ್‌ಗೆ ಹೈಕೋರ್ಟ್ ಸೂಚನೆ, 23 ಸಾವು!

ಚೋದನಾಕಾರಿ ಭಾಷಣ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿ, ದ್ವೇಷದ ಭಾಷಣ ಮಾಡಿದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ರಚೋದನಾಕಾರಿ ಭಾಷಣ ಮಾಡಿ ಗಲಭೆಗೆ ಕುಮ್ಮಕ್ಕು ನೀಡಿ, ದ್ವೇಷದ ಭಾಷಣ ಮಾಡಿದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ. 

ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೀಡಿದ್ದಾರೆ ಎನ್ನಲಾದ ವಿವಾದಿತ ಹೇಳಿಕೆಗೆ ಸಂಬಂಧಿಸಿದ ವಿಡಿಯೊವನ್ನೂ ಕೋರ್ಟ್ ಇಂದು ಸಮಗ್ರವಾಗಿ ಪರಿಶೀಲನೆ ನಡೆಸಿತು. ನಂತರ ಹೈಕೋರ್ಟ್ ಈ ಆದೇಶವನ್ನು ನೀಡಿದೆ.

ಗಾಯಾಳುಗಳಿಗೆ ತಕ್ಷಣ ತುರ್ತು ಚಿಕಿತ್ಸೆ ಒದಗಿಸಲು ಬೇಕಾದ ಸೌಲಭ್ಯ, ಅನುಕೂಲ ಮಾಡಿಕೊಡುವಂತೆ ಪೊಲೀಸರಿಗೆ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ. ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಪರ ಮತ್ತು ವಿರೋಧದ ಹಿಂಸಾಚಾರ ಮತ್ತು ಗಲಭೆಯಿಂದ ಮೃತಪಟ್ಟವರ ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. 

ಮತ್ತೆ 1984ರ ದಂಗೆ ಮರುಕಳಿಸಲು ಬಿಡಬಾರದು: ದೆಹಲಿ ಹಿಂಸಾಚಾರದ ಕುರಿತು ಹೈಕೋರ್ಟ್ ಕಳವಳ
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವಾಗಿ ರಾಜಧಾನಿ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಕುರಿತು ದೆಹಲಿ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮತ್ತೆ 1984ರ ದಂಗೆ ಮರುಕಳಿಸಲು ಬಿಡಬಾರದು ಎಂದು ಹೇಳಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧಿ ಬಣಗಳ ನಡುವಿನ ಸಂಘರ್ಷದಿಂದ ಉಂಟಾದ ಹಿಂಸಾಚಾರದಲ್ಲಿ ಈ ವರೆಗೂ 23 ಮಂದಿ ಬಲಿಯಾಗಿದ್ದು, 200ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಈ ಪೈಕಿ ಹಲವ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹಿಂಸಾಚಾರದ ಪ್ರಕರಣವನ್ನು ದೆಹಲಿ ಹೈಕೋರ್ಟ್​ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಕಪಿಲ್​ ಮಿಶ್ರಾ ಆಡಿರುವ ಪ್ರಚೋದನಾಕಾರಿ ಭಾಷಣದ ಆಡಿಯೋವನ್ನು ಕೇಳಿಸಿಕೊಂಡಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ಸಂಬಂಧಪಟ್ಟ ಗಲಭೆಯನ್ನು ಸಹಿಸಿಕೊಳ್ಳುವುದಿಲ್ಲ. 1984ರಲ್ಲಿ ನಡೆದಿದ್ದ ಸಿಖ್​ ವಿರೋಧಿ ದಂಗೆಯಂತಹ ಹಿಂಸಾಚಾರ ಇನ್ನೊಮ್ಮೆ ನಡೆಯಲು ಕೋರ್ಟ್​ ಯಾವ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಗಲಭೆಯ ಮೇಲೆ ಕೋರ್ಟ್​ ಕಣ್ಗಾವಲು ಇಡಲು ಸಾಧ್ಯವಿಲ್ಲ. ಹಿಂಸಾಚಾರದಿಂದ ಹಾನಿಗೊಳಗಾದ ಪ್ರದೇಶಗಳಿಗೆ ದೆಹಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಭೇಟಿಕೊಡಬೇಕು. ಸಂತ್ರಸ್ತ ಜನರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹೈಕೋರ್ಟ್ ಹೇಳಿದೆ.

ಅಲ್ಲದೆ, ಸಂತ್ರಸ್ತರಿಗಾಗಿ ಸಹಾಯವಾಣಿ ಕೇಂದ್ರ ತೆರೆಯಬೇಕು. ಗಾಯಾಳುಗಳನ್ನು ಸುರಕ್ಷಿತವಾಗಿ ಸಾಗಿಸಲು ಖಾಸಗಿ ಆಂಬುಲೆನ್ಸ್​ಗಳನ್ನು ಒದಗಿಸಬೇಕು. ಮನೆಯನ್ನು ಕಳೆದುಕೊಂಡವರಿಗೆ ಆಶ್ರಯಕೇಂದ್ರಗಳನ್ನು ನಿರ್ಮಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ದೆಹಲಿ ಆಡಳಿತಕ್ಕೆ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com