ಜೆಎನ್ ಯು ಹಿಂಸಾಚಾರ ರಾಷ್ಟ್ರೀಯ ಸಮಸ್ಯೆಯಲ್ಲ, ಕಾಲೇಜುಗಳಲ್ಲಿ ಗ್ಯಾಂಗ್ ವಾರ್ ಗಳು ಸಾಮಾನ್ಯ: ಕಂಗನಾ ರಾನಾವತ್ 

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ರಾತ್ರಿ ವೇಳೆ ಮುಸುಕುಧಾರಿಗಳು ಬಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಕಂಗನಾ ರಾನಾವತ್, ಇದನ್ನು ಒಂದು ರಾಷ್ಟ್ರಮಟ್ಟದ ಸುದ್ದಿ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ. 
ಥಿಂಕ್ ಎಡು ಸಮ್ಮೇಳನದಲ್ಲಿ ಭಾಗವಹಿಸಿದ ಕಂಗನಾ ರಾನಾವತ್
ಥಿಂಕ್ ಎಡು ಸಮ್ಮೇಳನದಲ್ಲಿ ಭಾಗವಹಿಸಿದ ಕಂಗನಾ ರಾನಾವತ್

ಚೆನ್ನೈ: ಇತ್ತೀಚೆಗೆ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೇಲೆ ರಾತ್ರಿ ವೇಳೆ ಮುಸುಕುಧಾರಿಗಳು ಬಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ಕಂಗನಾ ರಾನಾವತ್, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಈ ತರಹದ ಗ್ಯಾಂಗ್ ವಾರ್ ಗಳನ್ನು ಹೆಚ್ಚು ಚಂಚಲಶೀಲ ವ್ಯಕ್ತಿಗಳು ಮಾಡುತ್ತಾರೆ, ಹೀಗಾಗಿ ಇದನ್ನು ಒಂದು ರಾಷ್ಟ್ರಮಟ್ಟದ ವಿಷಯ ಮಾಡುವ ಅಗತ್ಯವಿಲ್ಲ ಎಂದರು.


ಚೆನ್ನೈಯಲ್ಲಿ ಅವರು ನಿನ್ನೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಸ್ಥೆ ಏರ್ಪಡಿಸಿದ್ದ ಥಿಂಕ್ ಎಡು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿ, ಹೀಗೆ ಕಾಲೇಜುಗಳಲ್ಲಿ ಹಿಂಸಾಚಾರ ನಡೆಸುವವರನ್ನು ಪೊಲೀಸ್ ಕಸ್ಡಡಿಗೆ ಕರೆದೊಯ್ದು ನಾಲ್ಕು ಏಟು ಕೊಡಬೇಕೆಂದರು.


ಕಾಲೇಜುಗಳಲ್ಲಿ ಗ್ಯಾಂಗ್ ವಾರ್ ಆಗುವುದು ಎಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ ಎಂದರೆ ನಾವು ಚಂಡೀಗಢದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ಕ್ಯಾಂಪಸ್ ನ ಹೊರಗೆ ಹುಡುಗರ ಹಾಸ್ಟೆಲ್ ಇತ್ತು. ಹುಡುಗರು ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುವುದು, ಅಟ್ಟಿಸಿಕೊಂಡು ಹೋಗುವುದು ಕೊನೆಗೆ ಸಾರ್ವಜನಿಕವಾಗಿ ಕೊಲೆ ಮಾಡಲು ಕೂಡ ಹೇಸುತ್ತಿರಲಿಲ್ಲ. ಈಗಲೂ ಕೂಡ ಪರಿಸ್ಥಿತಿ ಹಾಗೆಯೇ ಇದೆ. ಜೆಎನ್ ಯು ಹಿಂಸಾಚಾರ ವಿಚಾರ ತೆಗೆದುಕೊಂಡರೆ ಎರಡೂ ಕಡೆಯವರು ಗಾಯಗೊಂಡಿದ್ದಾರೆ. ಇಂತಹ ಗ್ಯಾಂಗ್ ವಾರ್ ಗಳು ದೃಢ ಮನಸ್ಸು ಹೊಂದಿರದ ಚಂಚಲಚಿತ್ತ ವ್ಯಕ್ತಿಗಳು ಮಾಡುತ್ತಾರೆ. ಹೀಗಿರುವಾಗ ಇದಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಾಧಾನ್ಯತೆ ನೀಡುವ ಅಗತ್ಯವಿದೆ ಎಂದು ನನಗೆ ಅನಿಸುವುದಿಲ್ಲ ಎಂದು ಕೇಳಿದರು.


ಇಂತಹ ಗೂಂಡಾಗಳು ಪ್ರತಿ ತರಗತಿಗಳಲ್ಲಿ, ಸಂಘಟನೆಗಳಲ್ಲಿ, ಪ್ರತಿ ಪ್ರದೇಶದಲ್ಲಿ ಕಾಣಸಿಗುತ್ತಾರೆ, ಹೀಗಾಗಿ ಇಂತಹ ವಿಚಾರಗಳನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.


ವಿದ್ಯಾರ್ಥಿಗಳು ರಾಜಕೀಯವಾಗಿ ಹೆಚ್ಚು ಜಾಗೃತರಾಗಬೇಕು. ದೇಶದಲ್ಲಿಯೇ ನಮ್ಮ ಭಾರತ ಅತಿ ಹೆಚ್ಚು ಭ್ರಷ್ಟ ರಾಷ್ಟ್ರವಾಗಿದೆ. ಭ್ರಷ್ಟಾಚಾರವೆಂಬುದು ನರನಾಡಿಗಳಲ್ಲಿ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ಆಡಳಿತ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವುದು ಈ ಹೊತ್ತಿನ ಅನಿವಾರ್ಯವಾಗಿದೆ. ಯುವಕರಲ್ಲಿ ನೈತಿಕ ಮೌಲ್ಯಗಳನ್ನು ತುಂಬಬೇಕು. ಸಮಾಜದ ಬಿಂಬವೆನಿಸಿರುವ ಇಂದಿನ ವಿದ್ಯಾರ್ಥಿಗಳನ್ನು ಕನಿಷ್ಠ ಒಂದೆರಡು ವರ್ಷಗಳಾದರೂ ದೇಶ ಸೇವೆ ಮಾಡಲು ಸೇನೆಗೆ ಕಳುಹಿಸಬೇಕು ಮತ್ತು ಅದನ್ನು ಕಡ್ಡಾಯ ಮಾಡಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com