ಬಿಜೆಪಿ ಸಂಸದೀಯ ಪಕ್ಷ ಸಭೆಯಲ್ಲಿ ನಾಯಕರು
ಬಿಜೆಪಿ ಸಂಸದೀಯ ಪಕ್ಷ ಸಭೆಯಲ್ಲಿ ನಾಯಕರು

ವಿರೋಧ ಪಕ್ಷದವರಿಗೆ ಸ್ವ ಹಿತಾಸಕ್ತಿ ಮುಖ್ಯವಾದರೆ, ನಮಗೆ ದೇಶದ ಹಿತಾಸಕ್ತಿ ಮುಖ್ಯ: ಪ್ರಧಾನಿ ಮೋದಿ

ದೇಶದ ಬೆಳವಣಿಗೆಗೆ ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಒಗ್ಗಟ್ಟಿನ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Published on

ನವದೆಹಲಿ: ದೇಶದ ಬೆಳವಣಿಗೆಗೆ ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಒಗ್ಗಟ್ಟಿನ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದು ದೆಹಲಿಯಲ್ಲಿ ಬಿಜೆಪಿ ಸಂಸದೀಯ ಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶಾಂತಿ, ಸಾಮರಸ್ಯ ಕಾಪಾಡಲು ಸಂಸದರು, ಜನಪ್ರತಿನಿಧಿಗಳು ಮುಂದಾಳತ್ವ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ನಮಗೆ ದೇಶದ ಹಿತಾಸಕ್ತಿ ಮುಖ್ಯ: ಕೆಲವು ಪಕ್ಷಗಳಿಗೆ ರಾಜಕೀಯ ಹಿತಾಸಕ್ತಿಗಳೇ ಮುಖ್ಯವಾಗುತ್ತದೆ ಮತ್ತು ಶ್ರೇಷ್ಠವಾಗುತ್ತದೆ, ಆದರೆ ಬಿಜೆಪಿಗೆ ರಾಷ್ಟ್ರದ ಹಿತಾಸಕ್ತಿ ಮುಖ್ಯ, ದೇಶ, ದೇಶದ ಹಿತಾಸಕ್ತಿ, ಅಭಿವೃದ್ಧಿ ನಮ್ಮ ಮಂತ್ರವಾಗಿದೆ ಎಂದರು. 

ಇಂದಿಗೂ ಕೆಲವು ಪಕ್ಷಗಳಿಗೆ ರಾಷ್ಟ್ರದ ಹಿತಾಸಕ್ತಿಗಿಂತ ವೈಯಕ್ತಿಕ ಹಿತಾಸಕ್ತಿಗಳೇ ಮೇಲೆನಿಸುತ್ತದೆ. ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಕೂಡ ದೇಶದ ಹಿತಾಸಕ್ತಿ ಮತ್ತು ಪಕ್ಷದ ಹಿತಾಸಕ್ತಿಗಳು ಚರ್ಚೆಗೆ ಬಂದಿದ್ದವು. ಈಗಲೂ ಕೂಡ ಅಂತಹದ್ದೇ ವಾತಾವರಣ ಕಂಡುಬರುತ್ತಿದೆ ಎಂದು ಪ್ರಧಾನ ಮಂತ್ರಿಗಳು ಸಭೆಯಲ್ಲಿ ಹೇಳಿದ್ದಾಗಿ ಹೊರಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಸುದ್ದಿಗಾರರಿಗೆ ತಿಳಿಸಿದರು.

ಸ್ವಾತಂತ್ರ್ಯ ಸಂಗ್ರಾಮ ಸಮಯದಲ್ಲಿ ವಂದೇ ಮಾತರಂ ವಿಷಯ ತೀವ್ರ ಚರ್ಚೆಗೊಳಗಾಗಿತ್ತು. ಭಾರತ್ ಮಾತಾ ಕಿ ಜೈ ವಿಚಾರದಲ್ಲಿ ಕೂಡ ಅಂತಹದ್ದೇ ವಿವಾದ ಸೃಷ್ಟಿಸುವ ಪ್ರಯತ್ನ ನಡೆಯಿತು ಎಂದು ಸಭೆಯಲ್ಲಿ ಪ್ರಧಾನಿ ಹೇಳಿದರು. 

ಈಶಾನ್ಯ ದೆಹಲಿಯಲ್ಲಿ ವ್ಯಾಪಕ ಹಿಂಸಾಚಾರ ನಡೆದು 40ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಮಂದಿಗೆ ಗಾಯವಾಗಿರುವ ಘಟನೆ ಬಳಿಕ ಪ್ರಧಾನಿ ಮೋದಿಯವರು ಇಂದು ಬಿಜೆಪಿ ಸಂಸದೀಯ ಸಭೆಯಲ್ಲಿ ಈ ಮಾತು ಹೇಳಿರುವುದು ಪ್ರಸ್ತುತವಾಗಿದೆ. 

ಸಂಸತ್ತಿನಲ್ಲಿ ಬಜೆಟ್ ಅಧಿವೇಶನದಲ್ಲಿ ಮೋದಿ ಸರ್ಕಾರವನ್ನು ಪ್ರತಿಪಕ್ಷಗಳು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com