ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ: ಗಣ್ಯರು, ರಾಜಕೀಯ ನಾಯಕರು ಹೇಳಿದ್ದೇನು?

2012ರ ಡಿಸೆಂಬರ್ 16ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಲಿಸುವ ಬಸ್ ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ 8 ವರ್ಷಗಳ ಬಳಿಕ ಕೊನೆಗೂ ಗಲ್ಲುಶಿಕ್ಷೆ ವಿಧಿಸಿದ್ದನ್ನು ಗಣ್ಯರು,ರಾಜಕೀಯ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಗಲ್ಲುಶಿಕ್ಷೆ: ಗಣ್ಯರು, ರಾಜಕೀಯ ನಾಯಕರು ಹೇಳಿದ್ದೇನು?

ನವದೆಹಲಿ:2012ರ ಡಿಸೆಂಬರ್ 16ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಲಿಸುವ ಬಸ್ ನಲ್ಲಿ ಯುವತಿ ಮೇಲೆ ಭೀಕರವಾಗಿ ಅತ್ಯಾಚಾರ ಎಸಗಿ ಆಕೆಯ ಸಾವಿಗೆ ಕಾರಣವಾಗಿದ್ದ ಹಂತಕರಿಗೆ 8 ವರ್ಷಗಳ ಬಳಿಕ ಕೊನೆಗೂ ಗಲ್ಲುಶಿಕ್ಷೆ ವಿಧಿಸಿದ್ದನ್ನು ಗಣ್ಯರು,ರಾಜಕೀಯ ನಾಯಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನ್ಯಾಯ ಮೇಲುಗೈ ಸಾಧಿಸಿದೆ. ಮಹಿಳೆಯರ ಘನತೆ ಮತ್ತು ಸುರಕ್ಷತೆಯನ್ನು ಕಾಪಾಡಲು ಈ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ನಮ್ಮ ನಾರಿ ಶಕ್ತಿ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದೆ. ಒಟ್ಟಾಗಿ, ನಾವು ಮಹಿಳಾ ಸಬಲೀಕರಣದ ಮೇಲೆ ಕೇಂದ್ರೀಕರಿಸುವ ರಾಷ್ಟ್ರವನ್ನು ನಿರ್ಮಿಸಬೇಕು, ಅಲ್ಲಿ ಸಮಾನತೆ ಮತ್ತು ಅವಕಾಶಕ್ಕೆ ಒತ್ತು ನೀಡಲಾಗುತ್ತದೆ ಎಂದು ನಿರ್ಭಯಾ ಅಪರಾಧಿಗಳಿಗೆ ಗಲ್ಲುಶಿಕ್ಷೆ ಆದ ನಂತರ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

ಇನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಅತ್ಯಂತ ಖಂಡನೀಯ ಅಪರಾಧಗಳಲ್ಲಿ ಒಂದನ್ನು ಮಾಡಿದ ಎಲ್ಲ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಇದನ್ನು ಮೊದಲೇ ಮಾಡಬೇಕಾಗಿತ್ತು. ಗಲ್ಲುಶಿಕ್ಷೆಯಂತಹ ಕ್ರೂರ ಶಿಕ್ಷೆಗೆ ಗುರಿಯಾದವರಿಗೆ 7 ವರ್ಷಗಳ ಕಾಲ ವಿಳಂಬ ತೋರಿ ವ್ಯವಸ್ಥೆಯನ್ನು ತಿರುಚಲು ಅವಕಾಶ ನೀಡಲಾಗುತ್ತದೆ ಎಂಬುದನ್ನು ಸಹ ನಿರ್ಭಯಾ ಅತ್ಯಚಾರಿಗಳ ಕೇಸಿನಲ್ಲಿ ತೋರಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ, ನ್ಯಾಯ ಸಿಗಲು ಸ್ವಲ್ಪ ವಿಳಂಬವಾಯಿತು, ಆದರೂ ಕೊನೆಗೆ ತೀರ್ಪು ಖುಷಿ ತಂದಿದೆ. ಮಹಿಳೆಯರ ವಿರುದ್ಧ ಅಪರಾಧ ಮಾಡಿ ಕಾನೂನಿನಿಂದ ರಕ್ಷಣೆ ಪಡೆಯಬಹುದು ಎಂದು ಭಾವಿಸುವವರಿಗೆ ಇಂದು ಸಂದೇಶ ಸಿಕ್ಕಿದೆ ಎಂದರು.
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ, ಭಾರತೀಯ ದಂಡ ಸಂಹಿತೆ ಮತ್ತು ಅಪರಾಧ ಪ್ರಕರಣಗಳಲ್ಲಿ ಇರುವ ಎಲ್ಲಾ ನ್ಯೂನತೆಗಳನ್ನು ಬಹಿರಂಗಪಡಿಸುವ ಕೇಸು ಇದು. ಇಂತಹ ಪ್ರಕರಣಗಳಲ್ಲಿ ಕೂಡಲೇ ಶಿಕ್ಷೆ ನೀಡಬೇಕು. ಇನ್ನು ಮುಂದೆ ಭಾರತ ಸರ್ಕಾರ ಐಪಿಸಿ ಮತ್ತು ಸಿಆರ್ ಪಿಸಿ ಸೆಕ್ಷನ್ ಗಳಲ್ಲಿ ಕೆಲವು ಬದಲಾವಣೆಗಳನ್ನು ತರಲು ಬಯಸುತ್ತಿದೆ ಎಂದರು.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಪ್ರತಿಕ್ರಿಯೆ ನೀಡಿ, ಇಂದು ಕಾನೂನಿನಲ್ಲಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಮಾದರಿ ಉದಾಹರಣೆಯನ್ನು ಸೃಷ್ಟಿ ಮಾಡಲಾಗಿದೆ. ಇದನ್ನು ಹಿಂದೆಯೇ ಮಾಡಬೇಕಾಗಿತ್ತು. ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ ಎಂದು ಜನರಿಗೆ ಗೊತ್ತಾಗಿದೆ. ದಿನಾಂಕ ಮುಂದೂಡಬಹುದು, ಆದರೆ ಶಿಕ್ಷೆ ಇಂದಲ್ಲದಿದ್ದರೆ, ನಾಳೆ ಸಿಕ್ಕೇ ಸಿಗುತ್ತದೆ ಎಂದು ಇಂದಿನ ಗಲ್ಲುಶಿಕ್ಷೆ ಸ್ಪಷ್ಟವಾಗಿ ಸಂದೇಶ ರವಾನಿಸಿದೆ ಎಂದರು.

ದೆಹಲಿ ಮಹಿಳಾ ಆಯೋಗ ಅಧ್ಯಕ್ಷೆ ಸ್ವಾತಿ ಮಲಿವಾಲ್, ಇದೊಂದು ಐತಿಹಾಸಿಕ ದಿನ, 7 ವರ್ಷಗಳ ನಂತರ ನಿರ್ಭಯಾಳ ಪೋಷಕರಿಗೆ ನ್ಯಾಯ ಸಿಕ್ಕಿದೆ. ಇಂದು ನಿರ್ಭಯಾ ಆತ್ಮಕ್ಕೆ ಶಾಂತಿ ಸಿಕ್ಕಿರಬಹುದು. ಅತ್ಯಾಚಾರಿಗಳಿಗೆ ಇಂದು ದೇಶ ಸರಿಯಾದ ಬಲವಾದ ಸಂದೇಶ ನೀಡಿದೆ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನಮಗೆ ನ್ಯಾಯ ಸಿಗಲು 7 ವರ್ಷ ಹಿಡಿಯಿತು. ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂದು ನಾವು ಪ್ರತಿಜ್ಞೆಯನ್ನು ಈ ಸಂದರ್ಭದಲ್ಲಿ ತೆಗೆದುಕೊಳ್ಳಬೇಕು. ತೀರಾ ಇತ್ತೀಚಿನವರೆಗೂ ಕಾನೂನನ್ನು ನಾಶ ಮಾಡಲು ಅತ್ಯಾಚಾರಿಗಳು ಹೇಗೆ ಪ್ರಯತ್ನಿಸುತ್ತಿದ್ದರು ಎಂದು ನಾವು ನೋಡಿದ್ದೇವೆ. ನಮ್ಮ ಕಾನೂನು ವ್ಯವಸ್ಥೆಯಲ್ಲಿ ಬಹಳಷ್ಟು ಕುಂದುಕೊರತೆಗಳಿವೆ. ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯಿದೆ ಎಂದಿದ್ದಾರೆ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟ್ವೀಟ್ ಮಾಡಿ, ನಮ್ಮ ನ್ಯಾಯಾಂಗ ವ್ಯವಸ್ಥೆ ಅತ್ಯಾಚಾರಿಗಳಿಗೆ ಹೊಸ ಷರಾ ಬರೆದಿದೆ ಎಂದಿದ್ದಾರೆ.


ನಿರ್ಭಯಾ ಅತ್ಯಾಚಾರ ಪ್ರಕರಣದ ಕಾನೂನು ಸಮರಕ್ಕೆ ಸಂದ ಜಯ, ನ್ಯಾಯಕ್ಕೆ ಸಿಕ್ಕ ಜಯ ಎಂದು ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com