ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿ ವಿಶೇಷ ಬಡ್ತಿ ಪಡೆದ ದೆಹಲಿಯ ಮೊದಲ ಮಹಿಳಾ ಪೊಲೀಸ್ ಹೆಡ್ ಕಾನ್ಸ್ಟೆಬಲ್!
ನವದೆಹಲಿ: ಕಾಣೆಯಾದ ಮಕ್ಕಳ ಪತ್ತೆಗಾಗಿ ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ವಿಶೇಷ ಬಡ್ತಿ ಪಡೆದ ದೆಹಲಿಯ ಮೊದಲ ಪೊಲೀಸ್ ಎಂಬ ಖ್ಯಾತಿಗೆ ಮಹಿಳಾ ಹೆಡ್ ಕಾನ್ಸ್ ಟೇಬಲ್ ಒಬ್ಬರು ಪಾತ್ರರಾಗಿದ್ದಾರೆ. ಪೊಲೀಸ್ ಆಯುಕ್ತ ಎಸ್. ಎನ್. ಶ್ರೀವಾಸ್ತವ ಈ ಘೋಷಣೆ ಮಾಡಿದ್ದಾರೆ.
ಸಮಯ್ ಪುರ ಬಾಡ್ಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸೀಮಾ ಢಾಕಾ ಎರಡೂವರೆ ತಿಂಗಳಲ್ಲಿ ನಾಪತ್ತೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿ ವಿಶೇಷ ಬಡ್ತಿಯನ್ನು ಪಡೆದುಕೊಂಡಿದ್ದಾರೆ. ಕಾಣೆಯಾದ ಮಕ್ಕಳನ್ನು ದೆಹಲಿಯಲ್ಲಿ ಮಾತ್ರವಲ್ಲದೇ ಪಂಜಾಬ್, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲೂ ಪತ್ತೆ ಹಚ್ಚಿದ್ದಾರೆ.
ಪಶ್ಚಿಮ ಬಂಗಾಳದಿಂದ ಏಳು ವರ್ಷದ ಬಾಲಕನೊಬ್ಬನನ್ನು ರಕ್ಷಿಸಿದ ನೋವಿನ ಪ್ರಕರಣವಿದೆ. 2018ರಲ್ಲಿ ಮನೆಯಿಂದ ತಪ್ಪಿಸಿಕೊಂಡಿದ್ದ ಬಾಲಕನನ್ನು ಅಕ್ಟೋಬರ್ 2020ರಲ್ಲಿ ಪಶ್ಚಿಮ ಬಂಗಾಳದಲ್ಲಿಯೇ ರಕ್ಷಿಸಿದ್ದಾಗಿ ಢಾಕಾ ಹೇಳಿದ್ದಾರೆ.
2018ರಲ್ಲಿ ಏಳು ವರ್ಷದ ಪುತ್ರ ಕಾಣೆಯಾದ ಬಗ್ಗೆ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಆದರೆ, ಅವರ ಮನೆ ವಿಳಾಸ, ಮೊಬೈಲ್ ನಂಬರ್ ಬದಲಾಗಿ ಆಕೆಯನ್ನು ಸಂಪರ್ಕಿಸುವುದು ತುಂಬಾ ತ್ರಾಸದಾಯಕವಾಗಿತ್ತು. ಹೇಗೋ ಪಶ್ಚಿಮ ಬಂಗಾಳದಲ್ಲಿ ಆಕೆಯ ಮಗನನ್ನು ಪತ್ತೆ ಮಾಡಿ, ಎರಡು ನದಿಗಳನ್ನು ದಾಟಿ ಆಕೆಯ ಊರು ತಲುಪಿದ್ದಾಗಿ ಢಾಕಾ ತಿಳಿಸಿದ್ದಾರೆ.
2006 ಜುಲೈ 3 ರಂದು ದೆಹಲಿ ಪೊಲೀಸ್ ಸೇವೆಗೆ ಸೇರಿದ ಢಾಕಾ, 2012ರವರೆಗೂ ಅಗ್ನೇಯ ದೆಹಲಿಯಲ್ಲಿಯೇ ಸೇವೆಗೆ ನಿಯೋಜನೆಗೊಂಡಿದ್ದರು. 2014ರಲ್ಲಿ ಬಡ್ತಿ ಪಡೆದು ಹೆಡ್ ಕಾನ್ಸ್ ಟೇಬಲ್ ಆಗಿದ್ದಾರೆ.
ಯಾವುದೇ ಕಾನ್ಸ್ ಟೇಬಲ್ ಅಥವಾ ಹೆಡ್ ಕಾನ್ಸ್ ಟೇಬಲ್ 12 ತಿಂಗಳೊಳಗೆ 14 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ 50 ಕ್ಕೂ ಹೆಚ್ಚು ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಿದರೆ ಅವರಿಗೆ ಈ ವಿಶೇಷ ಬಡ್ತಿ ನೀಡಲಾಗುತ್ತದೆ. ಇದೇ ಅವಧಿಯಲ್ಲಿ 15ಕ್ಕೂ ಹೆಚ್ಚು ಮಕ್ಕಳನ್ನು ಪತ್ತೆ ಹಚ್ಚಿದರೆ ಅಸಾಧಾರಾಣ ಕಾರ್ಯ ಪುರಸ್ಕಾರ ನೀಡಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ