ನವದೆಹಲಿ: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಐಸಿಎಸ್ ಇ ಅಥವಾ ಭಾರತೀಯ
ಶಾಲಾ ಪ್ರಮಾಣಪತ್ರ ಪರೀಕ್ಷೆಗಳ ಪರಿಷತ್ತು 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಮುಂದೂಡಿದೆ.
ಕೊರೋನಾ ವೈರಸ್ ಪ್ರಕರಣಗಳು ರಾಷ್ಟ್ರವ್ಯಾಪಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ, ಮೇ 4 ರಿಂದ ನಡೆಯಬೇಕಿದ್ದ 10 ಮತ್ತು 12 ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಪರೀಕ್ಷೆಗಳ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಗೆರ್ರಿ ಅರಾಥೂನ್ ಹೇಳಿದ್ದಾರೆ.
ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತೇವೆ ಮತ್ತು ಜೂನ್ ಮೊದಲ ವಾರದಲ್ಲಿ ಪರಿಶೀಲನೆ ನಡೆಸಿ, ಪರೀಕ್ಷೆ ನಡೆಸುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
12 ನೇ ತರಗತಿ ಪರೀಕ್ಷೆಗಳನ್ನು ನಂತರದ ಹಂತದಲ್ಲಿ ನಡೆಸಲಾಗುವುದು, 10 ನೇ ತರಗತಿಯ ವಿದ್ಯಾರ್ಥಿಗಳು ತದನಂತರ ಆಫ್‌ಲೈನ್ ಪರೀಕ್ಷೆಗಳಲ್ಲಿ ಹಾಜರಾಗಲು ಅಥವಾ ಮಂಡಳಿಯಿಂದ ಅಭಿವೃದ್ಧಿಪಡಿಸಿದ ನ್ಯಾಯಯುತ ಮತ್ತು ಪಕ್ಷಪಾತವಿಲ್ಲದ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಪಡೆಯುವ ಆಯ್ಕೆಯನ್ನು ಪಡೆಯುತ್ತಾರೆ" ಎಂದು ಅರಾಥೂನ್ ಹೇಳಿದರು.
ಈ ವಾರದ ಆರಂಭದಲ್ಲಿ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತನ್ನ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ 12 ನೇ ತರಗತಿ ಪರೀಕ್ಷೆಯನ್ನು ಮುಂದೂಡಿದೆ. ಹಲವಾರು ರಾಜ್ಯ ಮಂಡಳಿಗಳು ಕೂಡಾ ಪರೀಕ್ಷೆಗಳನ್ನು ಮುಂದೂಡಿವೆ ಅಥವಾ ರದ್ದುಗೊಳಿಸಿವೆ.
Advertisement