ಶಾಂತಿ ತರಲು ನೆರವಾಗುವುದಾದರೆ ಮೀಜೋರಾಂ ಪೊಲೀಸರಿಂದ ಬಂಧನಕ್ಕೂ ಸಿದ್ಧ- ಅಸ್ಸಾಂ ಮುಖ್ಯಮಂತ್ರಿ
ಗುವಾಹಟಿ: ನೆರೆಯ ರಾಜ್ಯಗಳಾದ ಅಸ್ಸಾಂ ಮತ್ತು ಮಿಜೋರಾಂ ನಡುವಣ ಶಾಂತಿ ತರಲು ನೆರವಾಗುವುದಾದರೆ ಮಿಜೋರಾಂ ಪೊಲೀಸರಿಂದ ಬಂಧನಕ್ಕೂ ಸಿದ್ಧನಾಗಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಭಾನುವಾರ ಹೇಳಿದ್ದಾರೆ. ಆರು ದಿನಗಳ ಹಿಂದೆ ಮಿಜೋರಾಂ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಅಸ್ಸಾಂನ ಏಳು ಪೊಲೀಸರು ಸಾವನ್ನಪ್ಪಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತುಕತೆಯಿಂದ ಮಾತ್ರ ವಿವಾದ ಬಗೆಹರಿಯಲು ಸಾಧ್ಯ, ಮಿಜೋರಾಂ ಪೊಲೀಸರಿಂದ ಯಾವುದೇ ಸಮನ್ಸ್ ತಡೆಯಲು ಜಾಮೀನು ಪಡೆಯಲು ಬಯಸುವುದಿಲ್ಲ ಎಂದರು.
ಅಸ್ಸಾಂ ಮುಖ್ಯಮಂತ್ರಿ ವಿರುದ್ಧ ದಾಖಲು ಮಾಡಿರುವ ಕೊಲೆ ಯತ್ನ ಮತ್ತು ಅಪರಾಧ ಪಿತೂರಿ ಪ್ರಕರಣಗಳನ್ನು ಮಿಜೋರಾಂ ಮುಖ್ಯಮಂತ್ರಿ ಹಿಂಪಡೆಯುವ ಸಾಧ್ಯತೆಯಿರುವುದಾಗಿ ಮಿಜೋರಾಂ ಮುಖ್ಯ ಕಾರ್ಯದರ್ಶಿ ಭಾನುವಾರ ಬೆಳಗ್ಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಈ ರೀತಿ ಹೇಳಿಕೆ ನೀಡಿದ್ದಾರೆ.
ನನಗೆ ಸಮನ್ಸ್ ನೀಡಿದರೆ ಸಿಲ್ಚಾರ್ ನಿಂದ ವೈರೆಂಗ್ಟೆವರೆಗೆ ಪಾದಯಾತ್ರೆಯಲ್ಲಿ ತೆರಳಿ ತನಿಖೆಯಲ್ಲಿ ಪಾಲ್ಗೊಳ್ಳುತ್ತೇನೆ. ಮಿಜೋರಾಂ ಪೊಲೀಸರು ನನನ್ನು ಆರೆಸ್ಟ್ ಮಾಡಿದರೆ, ಅದರಿಂದ ಶಾಂತಿ ತರಲು ನೆರವಾಗುವುದಾದರೆ ಬಂಧನಕ್ಕೆ ಸಿದ್ಧನಾಗಿದ್ದೇನೆ, ಗುವಾಹಟಿ ಹೈಕೋರ್ಟ್ ನಿಂದ ಜಾಮೀನು ಕೋರಲ್ಲ ಎಂದು ಹಿಮಂತಾ ಬಿಸ್ವಾ ಶರ್ಮಾ ಹೇಳಿದರು. ಘರ್ಷಣೆಗೆ ಸಂಬಂಧಿಸಿದಂತೆ ಆರು ಅಸ್ಸಾಂ ಪೊಲೀಸ್ ಅಧಿಕಾರಿಗಳ ವಿರುದ್ಧ ಮಿಜೋರಾಂ ಪೊಲೀಸರು ಎಫ್ ಐಆರ್ ಕೂಡಾ ದಾಖಲಿಸಿದ್ದಾರೆ.
ಆದಾಗ್ಯೂ,ಅಧಿಕಾರಿಗಳನ್ನು ರಕ್ಷಿಸುವುದಾಗಿ ಹೇಳಿರುವ ಶರ್ಮಾ, ಅಸ್ಸಾಂನಲ್ಲಿ ನಡೆದ ಘಟನೆಗಾಗಿ ಮಿಜೋರಾಂ ಪೊಲೀಸರು ತನಿಖೆ ಮಾಡಲು ಅನುಮತಿಸುವುದಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ