ವಿಸ್ಮಯ ವರದಕ್ಷಿಣೆ ಸಾವು ಪ್ರಕರಣ: ಪತಿಯನ್ನು ಸೇವೆಯಿಂದ ವಜಾಗೊಳಿಸಿದ ಕೇರಳ ಸರ್ಕಾರ
ತಿರುವನಂತಪುರಂ: ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಇತರರಿಗೆ ಮಾದರಿಯಾಗುವಂತಹ ಶಿಕ್ಷೆ ನೀಡಿದ್ದು, ಕೊಲ್ಲಂನಲ್ಲಿ ಪತ್ನಿ ಎಸ್‌ವಿ ವಿಸ್ಮಯ ಅವರಿಗೆ ವರದಕ್ಷಿಣೆ ಕಿರುಕುಳ ನೀಡುವ ಮೂಲಕ ಆಕೆಯ ಸಾವಿಗೆ ಕಾರಣರಾಗಿದ್ದ ಆರೋಪಿ ಎಸ್ ಕಿರಣ್ ಕುಮಾರ್ ಅವರನ್ನು ಸೇವೆಯಿಂದ ವಜಾಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
30 ವರ್ಷದ ಕಿರಣ್ ಕುಮಾರ್ ಅವರು ಕೊಲ್ಲಂನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಹಾಯಕ ಮೋಟಾರ್ ವಾಹನ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕಿರಣ್ ಕೆಲಸದಿಂದ ವಜಾಗೊಂಡರೆ ಭವಿಷ್ಯದಲ್ಲೂ ಸರ್ಕಾರಿ ಕೆಲಸಗಳಿಗೆ ಅನರ್ಹನಾಗುತ್ತಾನೆ.
ಆಂತರಿಕ ವಿಚಾರಣೆಯಲ್ಲಿ ಕಿರಣ್ ಕುಮಾರ್ ವಿರುದ್ಧದ ಆರೋಪ ಸಾಬೀತಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಆಂಟನಿ ರಾಜು ಅವರು ಹೇಳಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿದ ಆರೋಪಿ ನೌಕರನನ್ನು ಸೇವೆಯನ್ನು ವಜಾಗೊಳಿಸುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಈ ಶಿಕ್ಷೆ ನೀಡಲಾಗಿದೆಎಂದು ಅವರು ಹೇಳಿದ್ದಾರೆ.
ಕಿರಣ್ ಕುಮಾರ್ ಪತ್ನಿ, 24 ವರ್ಷದ ವಿಸ್ಮಯ ಅವರು ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಮತ್ತು ಸರ್ಜರಿ ವಿದ್ಯಾರ್ಥಿಯಾಗಿದ್ದು, ಜೂನ್ 21 ರಂದು ಶವವಾಗಿ ಪತ್ತೆಯಾಗಿದ್ದಳು. ವರದಕ್ಷಿಣೆಗಾಗಿ ಆಕೆಗೆ ಕಿರುಕುಳ ನೀಡಲಾಗಿತ್ತು. ಆಕೆಯ ಸಾವಿನಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಿ ಕಿರಣ್ ಕುಮಾರ್ ನನ್ನು ಬಂಧಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ