ಅಲಹಾಬಾದ್: ಕಳೆದ ವರ್ಷ ಅಮಾನತುಗೊಂಡಿದ್ದ ಮಕ್ಕಳ ವೈದ್ಯ ಡಾ.ಕಫೀಲ್ ಖಾನ್ ವಿರುದ್ಧ ಇಲಾಖಾ ಮರು ವಿಚಾರಣೆ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
24 ಫೆಬ್ರವರಿ 2020 ರ ಆದೇಶವನ್ನು ಈ ಅರ್ಜಿಯಲ್ಲಿ ಹಿಂಪಡೆಯಲಾಗಿದೆ. ಪ್ರತಿವಾದಿಗಳು ಈ ಪ್ರಕರಣದಲ್ಲಿ ಹೊಸದಾಗಿ ಮುಂದುವರೆಯುವ ಸ್ವಾತಂತ್ರ್ಯವನ್ನು ಕಾಯ್ದಿರಿಸಲಾಗಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಶ್ ಗೋಯೆಲ್ ಹೈಕೋರ್ಟ್ ಗೆ ಮಾಹಿತಿ ನೀಡಿದರು.
ಗೋರಖ್ ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಹಲವಾರು ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಆಗಸ್ಟ್ 22, 2017 ರಂದು ಡಾ. ಖಾನ್ ವಿರುದ್ಧ ಅಮಾನತು ಆದೇಶವನ್ನು ಜಾರಿಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಫೀಲ್ ಖಾನ್ ಅರ್ಜಿ ಸಲ್ಲಿಸಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಶಿಸ್ತು ಪ್ರಾಧಿಕಾರ ಖಾನ್ ವಿರುದ್ಧ ಮತ್ತೊಂದು ತನಿಖೆಗೆ ಆದೇಶಿಸಿತ್ತು ಮತ್ತು ಕಫೀಲ್ ಖಾನ್ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಈ ಪ್ರಕರಣವನ್ನು ಜುಲೈ 29 ರಂದು ಆಲಿಸಿದ್ದ ಹೈಕೋರ್ಟ್ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು. ಮೂರು ತಿಂಗಳ ಅವಧಿಯೊಳಗೆ ಶಿಸ್ತಿನ ಕ್ರಮ ಮುಕ್ತಾಯಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ನ್ಯಾಯಾಧೀಶ ಯಶವಂತ ಶರ್ಮಾ ಅವರ ಮುಂದೆ ವಾದ ಮಂಡಿಸಲಾಯಿತು. ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು ಮಂಗಳವಾರ ಮಾಡುವುದಾಗಿ ಹೇಳಿದೆ.
Advertisement