
ನವದೆಹಲಿ: ರಾಜ್ಯಸಭೆಯ ಆ.09 ರ ಕಲಾಪದಲ್ಲಿ ವಿಪಕ್ಷಗಳು ಮಂಡಿಸಿದ ನಿರ್ಣಯದ ಮೇಲಿನ ಮತದಾನದ ವೇಳೆ ಗೈರಾಗಿದ್ದ ಬಿಜೆಪಿ ಸಂಸದರ ಹೆಸರಿನ ಪಟ್ಟಿ ನೀಡುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ.
ಆ.09 ರ ಕಲಾಪದಲ್ಲಿ ವಿಪಕ್ಷಗಳ ಸದಸ್ಯರು statutory resolution ನಿರ್ಣಯ ಮಂಡಿಸಿದ್ದವು. ಈ ನಿರ್ಣಯದ ಪ್ರಕಾರ ನ್ಯಾಯಮಂಡಳಿ ಸುಧಾರಣಾ ವಿಧೇಯಕವನ್ನು ಆಯ್ಕೆ ಸಮಿತಿಗೆ ಕಳಿಸುವುದಕ್ಕೆ ಆಗ್ರಹಿಸಲಾಗಿತ್ತು. ಆದರೆ ವಿಪಕ್ಷಗಳ ನಿರ್ಣಯ ವಿಫಲವಾಯಿತು.
ಆ.10 ರಂದು ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಆ.09 ರ ಕಲಾಪದಲ್ಲಿ ವಿಪಕ್ಷಗಳು ಮಂಡಿಸಿದ ನಿರ್ಣಯದ ಮೇಲಿನ ಮತದಾನದ ವೇಳೆ ಗೈರಾಗಿದ್ದ ಬಿಜೆಪಿ ಸಂಸದರ ಹೆಸರಿನ ಪಟ್ಟಿ ನೀಡುವಂತೆ ಸೂಚಿಸಿದ್ದಾರೆ. ಸಂಸದೀಯ ಮಂಡಳಿ ಸಭೆಯಲ್ಲಿ ಒಲಂಪಿಕ್ ಪದಕ ವಿಜೇತರಿಗೆ ಎದ್ದು ನಿಂತು ಕರತಾಡನ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.
ಇದೇ ವೇಳೆ ಕ್ರೀಡೆಯನ್ನು ಉತ್ತೇಜಿಸಲು ಸಂಸತ್ ಸದಸ್ಯರಿಗೆ ಸೂಚನೆ ನೀಡಿರುವ ಪ್ರಧಾನಿ ಮೋದಿ, ತಮ್ಮ ಕ್ಷೇತ್ರಗಳಲ್ಲಿನ ಜನತೆಯಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಹಾಗೂ ಪೋಷಣ ಅಭಿಯಾನ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಉತ್ತೇಜಿಸುವುದಕ್ಕೆ ಸಂಸದರಿಗೆ ಸೂಚನೆ ನೀಡಿದ್ದಾರೆ.
Advertisement