ತಾಲಿಬಾನಿಗಳ ಸಂಭ್ರಮಾಚರಣೆ ವಿಡಿಯೋದಲ್ಲಿ ಇಬ್ಬರು ಮಲಯಾಳಿಗಳು: ಶಶಿ ತರೂರ್ ಶಂಕೆ

ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಕಾಂಗ್ರೆಸ್ ಸಂಸದ ಶಶಿ ತರೂರ್, ವಿಡಿಯೋದಲ್ಲಿ ಇಬ್ಬರು ತಾಲಿಬಾನಿಗಳು ಮಲಯಾಳಂನಲ್ಲಿ ಮಾತನಾಡುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಶಶಿ ತರೂರ್
ಶಶಿ ತರೂರ್

ನವದೆಹಲಿ: ಅಫ್ಘಾನಿಸ್ತಾನದ ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ಸಂದರ್ಭ ತಾಲಿಬಾನ್ ಬಂಡುಕೋರರ ಗುಂಪು ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವಿಡಿಯೋವೊಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಕಾಂಗ್ರೆಸ್ ಸಂಸದ ಶಶಿ ತರೂರ್, ವಿಡಿಯೋದಲ್ಲಿ ಇಬ್ಬರು ತಾಲಿಬಾನಿಗಳು ಮಲಯಾಳಂನಲ್ಲಿ ಮಾತನಾಡುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ. 

ವಿಡಿಯೋದಲ್ಲಿ ಓರ್ವ ತಾಲಿಬಾನಿ ಬಂಡುಕೋರ ಭಾವುಕನಾಗಿ ನೆಲಕ್ಕೆ ಮುತ್ತಿಡುತ್ತಿರುವುದನ್ನು ಕಾಣಬಹುದಾಗಿದೆ. ಹಿನ್ನೆಲೆಯಲ್ಲಿ ಅನೇಕರು ಆತನಿಗೆ ಸಾಂತ್ವನ ಹೇಳುತ್ತಿರುವುದು ಕೇಳಿಬರುತ್ತದೆ. ಅದೇ ವೇಳೆ ವಿಡಿಯೋದ ೮ನೇ ಸೆಕೆಂಡಿನ ಅವಧಿಯಲ್ಲಿ 'ಸಂಸಾರಿಕೆಟ್ಟಿ' ಎಂದು ವ್ಯಕ್ತಿಯೊಬ್ಬ ಕೇಳುತ್ತಾನೆ. ಇನ್ನೊಬ್ಬ ವ್ಯಕ್ತಿ ಅದಕ್ಕೆ ಉತ್ತರಿಸುತ್ತಾನೆ. ಇದರಿಂದಾಗಿ ತಾಲಿಬಾನ್ ಸೇನೆಯಲ್ಲಿ ಕೇರಳ ಮೂಲದವರು ಸೇರಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದಗಳು ನಡೆಯುತ್ತಿವೆ. 

ಆ ವಿಡಿಯೊವನ್ನು ರಮೀಜ್ ಎನ್ನುವ ಹೆಸರಿನ ಅಫ್ಘನ್ ಮೂಲದ ವ್ಯಕ್ತಿ ಪೋಸ್ಟ್ ಮಾಡಿದ್ದ. ಅದರ ಕೆಳಗೆ ಹಲವು ಮಂದಿ ಕೇರಳ ಮೂಲದ ಇಂಟರ್ನೆಟ್ ಬಳಕೆದಾರರು ಮಲಯಾಳಂ ಪದಗಳು ಕೇಳಿಬಂದ ಬಗ್ಗೆ ಪ್ರಶ್ನಿಸಿದ್ದರು. ಈ ಪ್ರಶ್ನೆಗಳಿಗೆ ಉತ್ತರಿಸಿರುವ ವಿಡಿಯೊ ಪೋಸ್ಟ್ ಮಾಡಿದ ವ್ಯಕ್ತಿ ತಾಲಿಬಾನ್ ಸೇನೆಯಲ್ಲಿ ಕೇರಳ ಮೂಲದ ವ್ಯಕ್ತಿಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಅಲ್ಲದೆ ವಿಡಿಯೋದಲ್ಲಿ ಕೇಳಿ ಬಂದ ಪದಗಳು ಬಲೂಚ್ ಪ್ರಾಂತ್ಯದ ಬ್ರಹ್ವಿ ಎನ್ನುವ ಭಾಷೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾನೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಲಯಾಳಂ ಪದದ ಸುತ್ತ ಚರ್ಚೆ ಮುಂದುವರಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com