ತಮಿಳುನಾಡು ಸರ್ಕಾರ ಮೇಕೇದಾಟು ಅಣೆಕಟ್ಟು ವಿಷಯವಾಗಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ ಜಿಟಿ) ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವುದಕ್ಕೆ ನಿರ್ಧರಿಸಿದೆ.
ಕರ್ನಾಟಕ ಅಣೆಕಟ್ಟು ನಿರ್ಮಾಣ ಮಾಡುವುದನ್ನು ತಡೆಗಟ್ಟಲು ಕ್ರಮ ಕೈಗೊಂಡಿರುವ ವಿವರಗಳನ್ನು ತಮಿಳುನಾಡಿನ ವಿಧಾನಸಭೆಯಲ್ಲಿ ಮಂಡಿಸಿರುವ ಜಲಸಂಪನ್ಮೂಲ ಸಚಿವ ದುರೈಮುರುಗನ್, ಮಾಧ್ಯಮಗಳ ವರದಿಯ ಮೂಲಕ ಕರ್ನಾಟಕ ಮೇಕೆದಾಟು ಅಣೆಕಟ್ಟು ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲು ಮುಂದಾಗಿರುವುದನ್ನು ಗಮನಿಸಿ, ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ಕರ್ನಾಟಕಕ್ಕೆ ಸೂಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
ಈ ನಡುವೆ ಎನ್ ಜಿಟಿ (ದಕ್ಷಿಣ ವಲಯ) ಸ್ವಯಂ ಪ್ರೇರಿತರಾಗಿ ವಿಷಯವನ್ನು ಕೈಗೆತ್ತಿಕೊಂಡಿದ್ದು, ಉಂಟಾಗಬಹುದಾದ ಹಾನಿಯನ್ನು ನಿರ್ಣಯಿಸಲು ಅಗತ್ಯ ಕ್ಲಿಯರೆನ್ಸ್ ನ್ನು ಪಡೆಯದೇ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿತ್ತೇ? ಎಂಬುದನ್ನು ಅರಿಯುವುದಕ್ಕೆ ಸಮಿತಿ ರಚನೆ ಮಾಡಿ ವರದಿ ಕೇಳಿತ್ತು.
ಆದರೆ ಕರ್ನಾಟಕ ಸಲ್ಲಿಸಿದ್ದ ಮರುಪರಿಶೀಲನೆ ಅರ್ಜಿಯ ಆಧಾರದಲ್ಲಿ, ವಿಷಯವನ್ನು ಸುಪ್ರೀಂ ಕೋರ್ಟ್ ಅವಲೋಕಿಸುತ್ತಿದೆ ಎಂದು ಎನ್ ಜಿಟಿ, ನವದೆಹಲಿ ವಿಷಯವನ್ನು ಕೈಬಿಟ್ಟಿತ್ತು.
ಎನ್ ಜಿಟಿ ತಮಿಳುನಾಡಿಗೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡದೇ ವಿಷಯವನ್ನು ಕೈಬಿಟ್ಟಿದ್ದರಿಂದ ತಮಿಳುನಾಡು ಸರ್ಕಾರ ಜೂ.17 ರ ಎನ್ ಜಿಟಿ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ" ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.
Advertisement