ನವದೆಹಲಿ: ಯುದ್ಧ ಪೀಡಿತ ಅಫ್ಘಾನಿಸ್ತಾನದ ಕಾಬೂಲ್ ನಿಂದ ಸಿಖ್ ಧರ್ಮಗ್ರಂಥವಾದ ಗುರು ಗ್ರಂಥ ಸಾಹಿಬ್‌ನ ಮೂರು ಪ್ರತಿಗಳು ಮತ್ತು 46 ಜನ ಅಫಘಾನ್ ಸಿಖ್ಖರು ಹಾಗೂ ಹಿಂದೂಗಳು ಸೇರಿದಂತೆ 75 ಜನರನ್ನು ಐಎಎಫ್ ವಿಮಾನ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ.
ಅಫ್ಘಾನಿಸ್ತಾನದಲ್ಲಿ ಸುಮಾರು 200ಕ್ಕೂ ಹೆಚ್ಚು ಅಫಘಾನ್ ಸಿಖ್ಖರು ಮತ್ತು ಹಿಂದುಗಳು ಇನ್ನೂ ಸಿಲುಕಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ವಾಯುಪಡೆ(ಐಎಎಫ್) ಯೊಂದಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿರುವ ಭಾರತೀಯ ವಿಶ್ವ ವೇದಿಕೆಯ ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಅವರು ಹೇಳಿದ್ದಾರೆ.
"ಈ ಜನರು ಕಾಬೂಲ್‌ನ ಕಾರ್ಟೆ ಪರ್ವಾನ್ ಗುರುದ್ವಾರದಲ್ಲಿ ಆಶ್ರಯ ಪಡೆದಿದ್ದಾರೆ, ಇದು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿದೆ" ಎಂದು ಅವರು ತಿಳಿಸಿದರು.
ಭಾರತೀಯರನ್ನು ಸ್ಥಳಾಂತರಿಸುವ ವಿಮಾನ ಘೋಷಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, "ಕಾಬೂಲ್ ವಿಮಾನ ನಿಲ್ದಾಣದಿಂದು ಐಎಎಫ್ ವಿಮಾನದ ಮೂಲಕ ಶ್ರೀ ಗುರು ಗ್ರಂಥ ಸಾಹಿಬ್ ಜಿಯನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಸಿಕ್ಕಿಬಿದ್ದ ಭಾರತೀಯ ಪ್ರಜೆಗಳಿಗೆ ದೇಶಕ್ಕೆ ಮರಳಲು ಆಶೀರ್ವದಿಸಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಎಪ್ಪತ್ತೈದು ಜನರು ಈ ವಿಮಾನದಲ್ಲಿದ್ದಾರೆ. ಮೂರು ಗುರು ಗ್ರಂಥ ಸಾಹಿಬ್ ಜೀಗಳನ್ನು ಭಾರತಕ್ಕೆ ತರಲಾಗುತ್ತಿದೆ "ಎಂದು ಚಾಂದೋಕ್ ಹೇಳಿದರು.
Advertisement