70 ವರ್ಷಗಳಲ್ಲಿ ಸೃಷ್ಟಿಸಲಾಗಿದ್ದ ಆಸ್ತಿಯನ್ನು ಮಾರಾಟ ಮಾಡಲಾಗುತ್ತಿದೆ: ಕೇಂದ್ರದ ಎನ್ಎಂಪಿ ಬಗ್ಗೆ ರಾಹುಲ್ ಗಾಂಧಿ
ನವದೆಹಲಿ: ಕೇಂದ್ರ ಸರ್ಕಾರದ ರಾಷ್ಟ್ರೀಯ ನಗದೀಕರಣ ಯೋಜನೆಯ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸುತ್ತಿದ್ದು, ಪಕ್ಷದ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.
70 ವರ್ಷಗಳಲ್ಲಿ ಸೃಷ್ಟಿಸಲಾಗಿದ್ದ ಆಸ್ತಿಯನ್ನು ಈಗ ಮಾರಾಟ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅವರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, ಒಂದೆಡೆ ಬಿಜೆಪಿ 70 ವರ್ಷಗಳಲ್ಲಿ ಏನೂ ಆಗೇ ಇಲ್ಲ ಎಂದು ಹೇಳುತ್ತದೆ. ಆದರೆ ಈಗ ಆ ಅವಧಿಯಲ್ಲಿ ಸೃಷ್ಟಿಯಾದ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿದೆ" ಎಂದು ಹೇಳಿದ್ದಾರೆ
ಪ್ರಮುಖ ಕ್ಷೇತ್ರಗಳಲ್ಲಿ ಏಕಸ್ವಾಮ್ಯವನ್ನು ಸೃಷ್ಟಿಸುವುದು ಮೋದಿ ಸರ್ಕಾರದ ಖಾಸಗೀಕರಣದ ಯೋಜನೆಯಾಗಿದ್ದು ಇದರಿಂದ ಉದ್ಯೋಗಗಳಿಗೆ ಕತ್ತರಿ ಬೀಳುತ್ತವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
6 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದ್ದು. ಈ ಪಟ್ಟಿಯಲ್ಲಿ ಪ್ರಮುಖವಾಗಿ ರಸ್ತೆಗಳು, ರೈಲ್ವೆ ಹಾಗೂ ವಿದ್ಯುತ್ ಗ್ರಿಡ್‌ಗಳೂ ಸೇರಿವೆ. ಆದರೆ ಭೂಮಿ ಮಾರಾಟ ಈ ಪಟ್ಟಿಯಲ್ಲಿ ಸೇರಿಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಎನ್ಎಂಪಿ ಘೋಷಣೆ ವೇಳೆ ತಿಳಿಸಿದ್ದರು.
ಚೆನ್ನೈ, ಭೋಪಾಲ್, ವಾರಾಣಸಿ, ವಡೋದರ ಸೇರಿ 25 ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ), 40 ರೈಲ್ವೆ ನಿಲ್ದಾಣಗಳು, 15 ರೈಲ್ವೆ ಸ್ಟೇಡಿಯಂಗಳು ಹಾಗೂ ಇನ್ನೂ ಗುರುತಿಸದ ಸಂಖ್ಯೆಯ ರೈಲ್ವೆ ಕಾಲೋನಿಗಳನ್ನು ಖಾಸಗಿ ಹೂಡಿಕೆಗಾಗಿ ಮಾರಾಟ ಮಾಡಲಾಗುತ್ತಿದೆ.
ಭೂಮಿ ಅಥವಾ ಮಾಲಿಕತ್ವದ ವರ್ಗಾವಣೆ ಇರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದು, ಎನ್ಎಂಪಿ ಸರ್ಕಾರದ ಬ್ರೌನ್ಫೀಲ್ಡ್ ಮೂಲಸೌಕರ್ಯ ಸ್ವತ್ತುಗಳ ನಾಲ್ಕು ವರ್ಷಗಳ ಪೈಪ್‌ಲೈನ್ ಅನ್ನು ಒಳಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ