
ಚಂಡಿಗಢ: ಬಿಜೆಪಿ ಸಭೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಶನಿವಾರ ಹರಿಯಾಣ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಘಟನೆಯಲ್ಲಿ ಸುಮಾರು 10 ರೈತರು ಗಾಯಗೊಂಡಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಾಜ್ಯ ಬಿಜೆಪಿ ಅಧ್ಯಕ್ಷ ಓಂ ಪ್ರಕಾಶ್ ಧಂಕರ್ ಮತ್ತು ಪಕ್ಷದ ಇತರ ಹಿರಿಯ
ನಾಯಕರು ಸಭೆಯಲ್ಲಿ ಹಾಜರಿದ್ದರು.
ಕರ್ನಾಲ್ ಕಡೆಗೆ ಹೋಗುವ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.
ರೈತರ ಪ್ರತಿಭಟನೆಯಿಂದಾಗಿ ಫತೇಹಾಬಾದ್-ಚಂಡಿಗಢ, ಗೊಹಾನಾ-ಪಾಣಿಪತ್ ಮತ್ತು ಜಿಂದ್-ಪಟಿಯಾಲ ಹೆದ್ದಾರಿಗಳು ಸೇರಿದಂತೆ ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಹರಿಯಾಣ ಭಾರತೀಯ ಕಿಸಾನ್ ಯೂನಿಯನ್(ಚದುನಿ) ಮುಖ್ಯಸ್ಥ ಗುರ್ನಾಮ್ ಸಿಂಗ್ ಚದುನಿ ಅವರು ಹೇಳಿದ್ದಾರೆ.
ಕರ್ನಾಲ್‌ನಿಂದ 15 ಕಿಮೀ ದೂರದಲ್ಲಿರುವ ಬಸ್ತಾರಾ ಟೋಲ್ ಪ್ಲಾಜಾದ ಬಳಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಲಾಠಿ ಚಾರ್ಜ್
ಮಾಡಲಾಗಿದ್ದು, ಕಾಂಗ್ರೆಸ್ ಪೊಲೀಸರ ಕ್ರಮವನ್ನು ಖಂಡಿಸಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಾಠಿಚಾರ್ಜ್ ನಂತರ ಗಾಯಗೊಂಡ ರೈತರ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದು ನಾಚಿಕೆಗೇಡು ಎಂದು ಹೇಳಿದ್ದಾರೆ.
"ಮತ್ತೊಮ್ಮೆ ರೈತರ ರಕ್ತ ಚೆಲ್ಲುತ್ತಿದೆ, ದೇಶ ನಾಚಿಕೆಯಿಂದ ತಲೆಬಾಗುವಂತಾಗಿದೆ" ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ, "#FarmersProtest" ಮತ್ತು "ರೈತ ವಿರೋಧಿ ಬಿಜೆಪಿ" ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದಾರೆ.
Advertisement