'ನಾಗಲ್ಯಾಂಡ್ ನಲ್ಲಿ ನಾಗರಿಕರ ಹತ್ಯೆ ದುರದೃಷ್ಟಕರ', ಹೊಣೆ ಹೊತ್ತುಕೊಂಡ ಸೇನೆ, ಉನ್ನತ ಮಟ್ಟದ ತನಿಖೆಗೆ ಆದೇಶ
ಗುವಾಹಟಿ: ನಾಗಲ್ಯಾಂಡ್ ನ ಮೊನ್ ಜಿಲ್ಲೆಯಲ್ಲಿ ನಾಗರಿಕರ ಹತ್ಯೆಯ ಹೊಣೆಯನ್ನು ಭಾರತೀಯ ಸೇನೆ ಹೊತ್ತುಕೊಂಡಿದೆ. ದಂಗೆಕೋರರ ಚಲನವಲನದ ಖಚಿತ ಮಾಹಿತಿ ಗುಪ್ತಚರ ಇಲಾಖೆಯಿಂದ ಪಡೆದ ನಂತರ, ತಿರು, ಮೊನ್ ಜಿಲ್ಲೆ, ನಾಗಾಲ್ಯಾಂಡ್ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ನಡೆಸಲು ಯೋಜಿಸಲಾಯಿತು.
ಈ ಘಟನೆ ನಡೆದುದಕ್ಕೆ ವಿಷಾದವಿದೆ. ನಾಗರಿಕರ ಸಾವಿಗೆ ಕಾರಣ ಪತ್ತೆಹಚ್ಚಲು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಗಲ್ಯಾಂಡ್ ನ ಡಿಮಪುರ್ ಮೂಲದ 3 ಕಾರ್ಪ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ಘಟನೆಯಲ್ಲಿ ಭದ್ರತಾ ಪಡೆ ಯೋಧರಿಗೆ ತೀವ್ರ ಗಾಯಗಳಾಗಿದ್ದು, ಸೈನಿಕರೊಬ್ಬರು ತೀವ್ರ ಗಾಯದಿಂದ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ.
ಇನ್ನು ಮುಖ್ಯಮಂತ್ರಿ ನಿಫಿಯು ರಿಯೊ ಟ್ವೀಟ್ ಮಾಡಿ, ನಾಗಲ್ಯಾಂಡ್ ನ ಮೊನ್ ನ ಒಟಿಂಗ್ ನಲ್ಲಿ ಇಂದು ನಡೆದ ನಾಗರಿಕರ ಹತ್ಯೆಗೆ ಕಾರಣವಾದ ದುರದೃಷ್ಟಕರ ಘಟನೆಯು ಅತ್ಯಂತ ಖಂಡನೀಯವಾಗಿದೆ. ದುಃಖಿತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಉನ್ನತ ಮಟ್ಟದ ಎಸ್‌ಐಟಿ ತನಿಖೆ ನಡೆಸಿ ನ್ಯಾಯ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಭದ್ರತಾ ಪಡೆ ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ 13 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಲವು ನಾಗಾ ಸಂಘಟನೆಗಳು ತಿಳಿಸಿವೆ. ಇತರ 11 ಮಂದಿ ನಾಗರಿಕರು ಗಾಯಗೊಂಡಿದ್ದು ಮತ್ತಿಬ್ಬರು ನಾಪತ್ತೆಯಾಗಿದ್ದಾರೆ.ಈ ಘಟನೆ ನಡೆದಿದ್ದು ನಿನ್ನೆ ರಾತ್ರಿ. ದಿನಗೂಲಿ ಕಾರ್ಮಿಕರಾಗಿದ್ದ ಸಂತ್ರಸ್ತರು ಕಲ್ಲಿದ್ದಲು ಗಣಿಯಿಂದ ಪಿಕ್ ಅಪ್ ಟ್ರಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ.
ನಾಗರಿಕರು ಶಾಂತತೆ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ